ಶಿಮ್ಲಾ (ಹಿಮಾಚಲ ಪ್ರದೇಶ): ತಮ್ಮದೇ ಆದ ಒಂದು ಸ್ವಂತ ಕಾರು, ಬೈಕ್ ಹೊಂದಬೇಕೆಂಬುದು ಬಹುಕೇತರ ಆಸೆ. ಇದರೊಂದಿಗೆ ತಮ್ಮ ವಾಹನಕ್ಕೆ ಗಮನ ಸೆಳೆಯುವ ನೋಂದಣಿ ನಂಬರ್ಗಳೂ ಇರಬೇಕೆಂದು ಬಯಸುವುದು ಸಾಮಾನ್ಯ. ಇದನ್ನು ವಿಐಪಿ ಅಥವಾ ವಿವಿಐಪಿ ಅಥವಾ ಫ್ಯಾನ್ಸಿ ನಂಬರ್ಗಳು ಎಂದು ಕರೆಯಲಾಗುತ್ತದೆ. ಇಂತಹ ಫ್ಯಾನ್ಸಿ ನಂಬರ್ ಹೊಂದಲು ಸಾಕಷ್ಟು ಹಣ ಖರ್ಚು ಮಾಡಬೇಕಾಗುತ್ತದೆ. ಹಿಮಾಚಲ ಪ್ರದೇಶದಲ್ಲಿ ಇಂತಹದ್ದೊಂದು ನಂಬರ್‌ಗೆ ಒಂದು ಕೋಟಿ ರೂ.ಗೂ ಅಧಿಕ ಬಿಡ್ ಮಾಡಲಾಗಿದೆ ಎಂದರೆ ನೀವು ನಂಬಲೇಬೇಕು.!
ಐಷಾರಾಮಿ ಕಾರಲ್ಲ! ಸ್ಕೂಟಿ ನಂಬರ್‌ಗೆ ಕೋಟಿ ಬಿಡ್: ರಾಜಧಾನಿ ಶಿಮ್ಲಾ ಜಿಲ್ಲೆಯಲ್ಲಿ ಹೆಚ್ಪಿ 999999 ಎಂಬ ವಿಐಪಿ ನಂಬರ್‌ನ ಬಿಡ್ ಒಂದು ಕೋಟಿ ರೂ ದಾಟಿದೆ. ಅಚ್ಚರಿ ಎಂದರೆ, ಈ ಸಂಖ್ಯೆ ಯಾವುದೇ ಐಷಾರಾಮಿ ಕಾರಿನ ನಂಬರ್ಗಾಗಿ ಅಲ್ಲ, ಸ್ಕೂಟಿಯ ನಂಬರ್‌ಗೆ ಇಷ್ಟೊಂದು ದೊಡ್ಡ ಮೊತ್ತದ ಬೇಡಿಕೆ ಬಂದಿದೆ. ಸ್ಕೂಟಿ ನಂಬರ್‌ಗೆ ಒಂದು ಸಾವಿರ ರೂ. ಮೀಸಲು ಬೆಲೆ ಇರಿಸಲಾಗಿದೆ. ಇಲ್ಲಿಯವರೆಗೆ ಸುಮಾರು 26 ಜನರು ಈ ಸಂಖ್ಯೆ ತೆಗೆದುಕೊಳ್ಳಲು ಆಸಕ್ತಿ ತೋರಿಸಿದ್ದಾರೆ. ಆದರೆ ಬಿಡ್ ಒಂದು ಕೋಟಿ 11 ಸಾವಿರ ರೂಪಾಯಿಗೆ ತಲುಪಿದೆ.
ನಾಳೆ ನಂಬರ್ ಹರಾಜು: ವಾಸ್ತವವಾಗಿ, ರಸ್ತೆ ಸಾರಿಗೆಯು ವಿವಿಐಪಿ ಸಂಖ್ಯೆಗಳಿಗೆ ಬಿಡ್‌ಗಳನ್ನು ಆಹ್ವಾನಿಸುತ್ತದೆ. ಈ ಸಂಖ್ಯೆಯನ್ನು ಪಡೆಯಲು ಆನ್‌ಲೈನ್ ಬಿಡ್ ಮಾಡಲು ಅವಕಾಶ ನೀಡಲಾಗುತ್ತಿದೆ. ಇಲ್ಲಿನ ಕೋಟ್‌ಖಾಯ್‌ನ ಪ್ರದೇಶದ ಬಹುಬೇಡಿಕೆಯ ಹೆಚ್ಪಿ 999999 ಆರ್‌ಎಲ್‌ಎ (ನೋಂದಣಿ ಮತ್ತು ಪರವಾನಗಿ ಪ್ರಾಧಿಕಾರ)ನ ಸ್ಕೂಟಿ ನಂಬರ್‌ಗೆ ಫೆಬ್ರವರಿ 17ರಂದು ಸಂಜೆ 5 ಗಂಟೆಯವರೆಗೆ ಬಿಡ್ಡಿಂಗ್ ನಡೆಯಲಿದೆ.