ಹೈದರಾಬಾದ್ :ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಬೃಹತ್ ಗಾಂಜಾ ಕೃಷಿಯನ್ನು ಮಾಡಲಾಗಿದೆ. ಅತ್ಯಂತ ರಹಸ್ಯವಾಗಿ ಈ ಬೆಳೆಯನ್ನು ಆಂಧ್ರ-ಒಡಿಶಾ ಗಡಿ (ಎಒಬಿ)ಯಲ್ಲಿ 15,000 ಎಕರೆಗೂ ಹೆಚ್ಚು ಜಾಗದಲ್ಲಿ ಬೆಳೆಯಲಾಗುತ್ತಿದೆ ಎಂದು ತಿಳಿದು ಬಂದಿದೆ. ದೇಶದಲ್ಲಿ ಎಲ್ಲೆಲ್ಲಿ ಗಾಂಜಾ ಕಂಡು ಬರುತ್ತದೆಯೋ, ಅದರ ಬೇರುಗಳು ಆಂಧ್ರಪ್ರದೇಶದಲ್ಲಿ ಪತ್ತೆಯಾಗುತ್ತಿವೆ ಎನ್ನಲಾಗಿದೆ.
ಒಂದು ಅಂದಾಜಿನ ಪ್ರಕಾರ, ವಾರ್ಷಿಕವಾಗಿ ಇಲ್ಲಿ ಬೆಳೆಯುವ ₹8,000 ಕೋಟಿ ಮೌಲ್ಯದ ಗಾಂಜಾವನ್ನು ದೇಶ ಮತ್ತು ವಿದೇಶಗಳಿಗೆ ಕಳ್ಳಸಾಗಣೆ ಮಾಡಲಾಗುತ್ತದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ ₹25,000 ಕೋಟಿಗಳಿಗಿಂತ ಹೆಚ್ಚು. ಮಹಾರಾಷ್ಟ್ರ, ತಮಿಳುನಾಡು ಮತ್ತು ಕೇರಳದ ಡ್ರಗ್ ಗ್ಯಾಂಗ್‌ಗಳು ವಿಶಾಖಪಟ್ಟಣದಲ್ಲಿ ಈ ಬೆಳೆಯನ್ನು ಬೆಳೆಯಲು ಮತ್ತು ದೇಶದ ಇತರ ಭಾಗಗಳಿಗೆ ಸಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.
ಇತ್ತೀಚೆಗಿನ ವರ್ಷಗಳಲ್ಲಿ ಆಂಧ್ರಪ್ರದೇಶದ ವಿವಿಧ ಜಿಲ್ಲೆಗಳ ಜನರು ಈ ಗಾಂಜಾವನ್ನು ಪೂರೈಸುವಲ್ಲಿ ಸಕ್ರಿಯರಾಗಿದ್ದಾರೆ. ಪೊಲೀಸರು ಮತ್ತು ಎಸ್‌ಇಬಿ ಅಧಿಕಾರಿಗಳು ಸಣ್ಣ ಪ್ರಮಾಣದ ಅಕ್ರಮ ಗಾಂಜಾ ಸಾಗಣೆಯನ್ನು ಹಿಡಿಯಲು ಸಮರ್ಥರಾಗಿದ್ದಾರೆ. ಆದರೆ, ನಿಜವಾದ ಗಾಂಜಾ ಪೂರೈಕೆದಾರರನ್ನು ಹತ್ತಿಕ್ಕಲು ಸಾಧ್ಯವಾಗುತ್ತಿಲ್ಲ.
ಅಧಿಕಾರಿಗಳು ರಸ್ತೆ ಮತ್ತು ರೈಲು ಸಾರಿಗೆಯ ಮೂಲಕ ಆಂಧ್ರಪ್ರದೇಶದ ಉದ್ದಕ್ಕೂ ಕಳ್ಳಸಾಗಣೆ ಮಾಡುತ್ತಿರುವ ಸಾವಿರಾರು ಟನ್ ಗಾಂಜಾಗಳಲ್ಲಿ ಕೇವಲ 2-3 ಪ್ರತಿಶತ ಮಾತ್ರ ಹಿಡಿಯಲು ಸಾಧ್ಯವಾಗಿದೆ. ಹಿಂದೆ ಕೆಲವು ಪ್ರಮಾಣದ ಗಾಂಜಾವನ್ನು ಮಾತ್ರ ಬಳಸಲಾಗುತ್ತಿತ್ತು.
ಕೆಲವು ವರ್ಷಗಳ ಹಿಂದೆ, ವಿಶಾಖಪಟ್ಟಣದಲ್ಲಿ ನೂರಾರು ಎಕರೆಗಳಲ್ಲಿ ಗಾಂಜಾ ಬೆಳೆಯಲಾಗುತ್ತಿತ್ತು. ಆದಾಗ್ಯೂ, ಈ ಪ್ರದೇಶವು ಡ್ರಗ್ ಗ್ಯಾಂಗ್‌ಗಳಿಗೆ ಹೆಚ್ಚು ಅನುಕೂಲಕರವಾಗಿದೆ. ಕೇರಳ, ಮಹಾರಾಷ್ಟ್ರ ಮತ್ತು ತಮಿಳುನಾಡಿನ ಡ್ರಗ್ ಗ್ಯಾಂಗ್‌ಗಳು ಉತ್ತಮ ಗುಣಮಟ್ಟದ ಮತ್ತು ಹೆಚ್ಚಿನ ಬೇಡಿಕೆಯಿರುವ ಶಿಲಾವತಿ ಗಾಂಜಾವನ್ನು ಬೆಳೆಯುತ್ತವೆ. ಗಿರಿಜನರ ಭೂಮಿಯನ್ನು ಗುತ್ತಿಗೆಗೆ ತೆಗೆದುಕೊಂಡು ಗಾಂಜಾ ಬೆಳೆಯಲಾಗುತ್ತಿದೆ. ಇದನ್ನು ದೇಶದ ವಿವಿಧ ಭಾಗಗಳಿಗೆ ಕಳ್ಳಸಾಗಾಣಿಕೆ ಮಾಡಲಾಗುತ್ತಿದೆ.
ಡ್ರಗ್ ಮಾಫಿಯಾ ಹತ್ತಿಕ್ಕುವಲ್ಲಿ ವಿಫಲ :ಪೊಲೀಸರು ಮತ್ತು ಎಸ್‌ಇಬಿ ಅಧಿಕಾರಿಗಳು ನಿರಂತರವಾಗಿ ದಾಳಿ ನಡೆಸಿ ಗಾಂಜಾವನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ವಿಶಾಖಪಟ್ಟಣದಿಂದ ವಿದೇಶಕ್ಕೆ ಬೇರು ಬಿಟ್ಟಿರುವ ಡ್ರಗ್ ಮಾಫಿಯಾ ಬೇರುಗಳನ್ನು ಹತ್ತಿಕ್ಕುವಲ್ಲಿ ಅವರು ವಿಫಲರಾಗುತ್ತಿದ್ದಾರೆ. ಗಾಂಜಾ ಬೆಳೆಯ ಮೇಲೆ ಸರಿಯಾದ ನಿಗಾ ಇಲ್ಲದೇ ಇರುವುದು ಇದಕ್ಕೆ ಕಾರಣ ಎನ್ನಬಹುದು. ಸರಬರಾಜು ಹಂತದಲ್ಲಿ ಗಾಂಜಾ ಎಲ್ಲಿಗೆ ತಲುಪುತ್ತದೆ ಎಂಬುದನ್ನು ಗುರುತಿಸುವ ಮೂಲಕ ಸೂತ್ರಧಾರರ ಮೂಲವನ್ನು ಪತ್ತೆ ಹಚ್ಚಲು ಸಾಧ್ಯವಿದೆ. ಆದರೆ, ಅಂತಹ ಯಾವುದೇ ಪ್ರಯತ್ನಗಳು ಕಂಡು ಬಂದಿಲ್ಲ.
ಗಾಂಜಾವನ್ನು ಅಕ್ರಮ ಸಾಗಾಟ :ಗಾಂಜಾವನ್ನು ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ, ಪಶ್ಚಿಮ ಬಂಗಾಳ, ಸಿಕ್ಕಿಂ, ನಾಗಾಲ್ಯಾಂಡ್, ತಮಿಳುನಾಡು, ಮಹಾರಾಷ್ಟ್ರ, ಕೇರಳ, ಚೆನ್ನೈ, ಒಡಿಶಾ, ತೆಲಂಗಾಣಕ್ಕೆ ಸಾಗಿಸಲಾಗುತ್ತದೆ. ಆಂಧ್ರಪ್ರದೇಶದಿಂದ ತೆಲಂಗಾಣದ ಮೂಲಕ ಮಹಾರಾಷ್ಟ್ರಕ್ಕೆ ಮತ್ತು ಅಲ್ಲಿಂದ ಈಶಾನ್ಯ ರಾಜ್ಯಗಳಿಗೆ ಸಾಗಿಸಲಾಗುತ್ತದೆ.
ಇತ್ತೀಚೆಗೆ, ಡಿಆರ್‌ಐ ಅಧಿಕಾರಿಗಳು ಉತ್ತರಪ್ರದೇಶದ ಲಖನೌ-ಆಗ್ರಾ ಎಕ್ಸ್‌ಪ್ರೆಸ್ ವೇನಲ್ಲಿ ಪ್ರಯಾಣಿಸುತ್ತಿದ್ದ ವಾಹನವನ್ನು ಪರಿಶೀಲಿಸಿದರು. ಈ ವೇಳೆ ₹1.45 ಕೋಟಿ ಮೌಲ್ಯದ 972 ಕೆಜಿ ಗಾಂಜಾವನ್ನು ಪತ್ತೆ ಮಾಡಿದರು. ಜುಲೈನಲ್ಲಿ ತಮಿಳುನಾಡಿನ ವಿವಿಧ ಭಾಗಗಳಲ್ಲಿ ಸರಬರಾಜು ಮಾಡಲು ಆಂಧ್ರಪ್ರದೇಶದಿಂದ ಸಾಗಿಸುತ್ತಿದ್ದ 120 ಕೆಜಿ ಗಾಂಜಾವನ್ನು ಚೆನ್ನೈ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ.
ಗುಂಟೂರು ನಗರ ಪೊಲೀಸರು ಇತ್ತೀಚೆಗೆ ಈ ಸಂಬಂಧ ಒಂದು ತಂಡವನ್ನು ಬಂಧಿಸಿದ್ದಾರೆ. ಗುಜರಾತಿನ ವಡೋದರಾಕ್ಕೆ ದ್ರವರೂಪದ ಗಾಂಜಾವನ್ನು ಸಾಗಿಸಲು ಯತ್ನಿಸುವ ವೇಳೆ ದಾಳಿ ನಡೆಸಿ ಬಂಧಿಸಲಾಗಿದೆ. ಹೈದರಾಬಾದ್ ಆಂಧ್ರಪ್ರದೇಶದಿಂದ ಗಾಂಜಾ ಕಳ್ಳಸಾಗಣೆ ಮಾಡುವ ಕೇಂದ್ರವಾಗಿದೆ. ಈ ನಗರದಲ್ಲಿ ಗಾಂಜಾ ಹೆಚ್ಚಾಗಿ ಕಂಡು ಬರುತ್ತದೆ. ಮಹಾರಾಷ್ಟ್ರದ ಕಾಳೆ ಗ್ಯಾಂಗ್ ಮತ್ತು ಪವಾರ್ ಗ್ಯಾಂಗ್ ಗಾಂಜಾ ಕಳ್ಳಸಾಗಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ಮಾನ್ಯಂನಲ್ಲಿ ಗಾಂಜಾ ಬೆಳೆಯ ಅಂದಾಜು :
- ಪ್ರತಿ ಗಾಂಜಾ ಗಿಡದಿಂದ ಸರಾಸರಿ ಇಳುವರಿ 250-350 ಗ್ರಾಂ
- ಪ್ರತಿ ಎಕರೆಗೆ ಸರಾಸರಿ ಇಳುವರಿ 1000 ಕೆಜಿ
- ಗುಣಮಟ್ಟವನ್ನು ಅವಲಂಬಿಸಿ, ಗಾಂಜಾ ಬೆಲೆ ಪ್ರತಿ ಕೆಜಿಗೆ ಸರಾಸರಿ ₹2,500 ರಿಂದ ₹3,000
- ಒಂದು ಎಕರೆ ಗಾಂಜಾ ಕೃಷಿಯಿಂದ ಎರಡು ಋತುಗಳಿಗೆ ₹60 ಲಕ್ಷ ಆದಾಯ
- ಎಕರೆಗೆ ಗಾಂಜಾ ಬೆಳೆಯುವ ವೆಚ್ಚ ಎರಡು ಋತುಗಳಿಗೆ ₹5 ಲಕ್ಷ
- ಒಂದು ಎಕರೆಗೆ ಹೆಚ್ಚುವರಿ ₹55 ಲಕ್ಷ ಲಾಭ
AOBನಲ್ಲಿ ಗಾಂಜಾ ಕೃಷಿ ಪ್ರದೇಶ :ವಾರ್ಷಿಕ 15,000 ಎಕರೆಗಳಲ್ಲಿ ಸಾಗುವಳಿಯಿಂದ ಡ್ರಗ್ ಗ್ಯಾಂಗ್‌ಗಳ ನಿವ್ವಳ ಆದಾಯ ಸುಮಾರು ₹8,000 ಕೋಟಿ ಆಗಿದೆ. ಆ ಗಾಂಜಾ ದರವು ಇತರ ರಾಜ್ಯಗಳಲ್ಲಿ ಮತ್ತು ವಿದೇಶಗಳಲ್ಲಿ ಕನಿಷ್ಟ ಮೂರು ಪಟ್ಟು ಹೆಚ್ಚಾಗಿದೆ. ಇದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳನ್ನು ತಲುಪಿದಾಗ ₹5,000 ಕೋಟಿಗೂ ಅಧಿಕ ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ.