ತಿರುವನಂತಪುರಂ:ಅಮೆರಿಕದ ನ್ಯೂಯಾರ್ಕ್ನಲ್ಲಿ ನಡೆಯುವ ಅನಿವಾಸಿ ಕಾರ್ಯಕ್ರಮದಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ಪಕ್ಕದಲ್ಲಿ ಕೂರಲು 82 ಲಕ್ಷ ರೂಪಾಯಿ ಪಾವತಿ ಮಾಡಲು ಸೂಚಿಸಲಾಗಿದೆ. ಇದು ದಕ್ಷಿಣ ರಾಜ್ಯದ ಸರ್ಕಾರ ಜನರಿಗೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ಆರೋಪಿಸಿದೆ.
ಜೂನ್ 9, 10 ಮತ್ತು 11 ರಂದು ನ್ಯೂಯಾರ್ಕ್ನಲ್ಲಿ ಅನಿವಾಸಿ ಕೇರಳಿಗರ ಸಮಾವೇಶವನ್ನು ನಿಗದಿಪಡಿಸಲಾಗಿದೆ. ಪಿಣರಾಯಿ ವಿಜಯನ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ, ಅವರ ಪಕ್ಕ ವೇದಿಕೆ ಮೇಲೆ ಕೂರಲು ಅನಿವಾಸಿ ಕೇರಳಿಗರು ಹಣ ನೀಡಬೇಕು ಎಂದು ಸೂಚಿಸಲಾಗಿದೆ. ಈ ಮೂಲಕ ನಿಧಿ ಸಂಗ್ರಹಣೆ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ, ವಿರೋಧ ಪಕ್ಷದ ನಾಯಕ ವಿ ಡಿ ಸತೀಶ್ ದೂರಿದ್ದಾರೆ.
ಅಮೆರಿಕದಲ್ಲಿ ನಡೆಯಲಿರುವ ಅನಿವಾಸಿ ಕೇರಳೀಯರ ಸಮಾವೇಶವಾದ 'ಲೋಕ ಕೇರಳ ಸಭೆ'ಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವ ಮಧ್ಯೆಯೇ ಮುಖ್ಯಮಂತ್ರಿ ಪಿಣರಾಯಿ ಅವರು ಹೊಸ ವಿವಾದದಲ್ಲಿ ಸಿಲುಕಿದ್ದಾರೆ. ಕಮ್ಯುನಿಸ್ಟ್ ಪಕ್ಷದ ಸಿಎಂ ಉಳ್ಳವ - ಇಲ್ಲದವರ ನಡುವಿನ ವ್ಯತ್ಯಾಸವನ್ನು ಜಗತ್ತಿಗೆ ತೋರಿಸುತ್ತಿದ್ದಾರೆ. ಸಿಎಂ ಹತ್ತಿರ ಕುಳಿತುಕೊಳ್ಳಲು 82 ಲಕ್ಷ ರೂ. ಮೊತ್ತವನ್ನು ಪಾವತಿಸಬೇಕಂತೆ. ರಾಜ್ಯ ಮತ್ತು ಸಿಎಂ ಹೆಸರಿನಲ್ಲಿ ಇಂತಹ ನಿಧಿ ಸಂಗ್ರಹಕ್ಕೆ ಅನುಮತಿ ನೀಡಿದವರು ಯಾರು? ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇದು ಕೇರಳ ಸರ್ಕಾರದ ಪ್ರತಿಷ್ಠೆಯನ್ನು ಹಾಳು ಮಾಡಲಿದೆ. ಮುಖ್ಯಮಂತ್ರಿಯ ಹತ್ತಿರ ಕುಳಿತುಕೊಳ್ಳಲು ಅಥವಾ ನಿಂತುಕೊಳ್ಳಲು 25,000 ದಿಂದ 100,000 ವರೆಗಿನ ಅಮೆರಿಕನ್ ಡಾಲರ್ ಆಫರ್ ನೀಡಲಾಗಿದೆ. ರಾಜ್ಯಕ್ಕೆ ಅವಮಾನಕರ ಸಂಗತಿ ಎಂದು ಕಾಂಗ್ರೆಸ್ ಕಿಡಿಕಾರಿದೆ.