ಕರ್ನಾಟಕ

karnataka

ETV Bharat / bharat

ಪೊಲೀಸರ ಯಶಸ್ವಿ ಕಾರ್ಯಾಚರಣೆ: 300 ಕೋಟಿ ಮೌಲ್ಯದ ಕೊಕೇನ್ ವಶ, ಇಬ್ಬರ ಬಂಧನ - ಜಮ್ಮು ಮತ್ತು ಕಾಶ್ಮೀರ ಪೊಲೀಸರು

ಜಮ್ಮುವಿನ ರಾಂಬನ್ ಜಿಲ್ಲೆಯಲ್ಲಿ ಅಪರಿಚಿತ ವಾಹನವೊಂದರಿಂದ ಬರೋಬ್ಬರಿ 300 ಕೋಟಿ ರೂಪಾಯಿ ಮೌಲ್ಯದ ಕೊಕೇನ್ ವಶಪಡಿಸಿಕೊಳ್ಳಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಭಾನುವಾರ ಹೇಳಿದ್ದಾರೆ.

Cocaine
ಕೊಕೇನ್

By ETV Bharat Karnataka Team

Published : Oct 2, 2023, 6:55 AM IST

ರಾಂಬನ್ ( ಜಮ್ಮು ಕಾಶ್ಮೀರ):ಕಾಶ್ಮೀರದಿಂದ ಪಂಜಾಬ್‌ಗೆ ತೆರಳುತ್ತಿದ್ದ ಖಾಸಗಿ ವಾಹನದಿಂದ 300 ಕೋಟಿ ಮೌಲ್ಯದ 30 ಕೆಜಿ ಕೊಕೇನ್ ಅನ್ನು ರಾಂಬನ್ ಜಿಲ್ಲೆಯ ಬನಿಹಾಲ್ ಪ್ರದೇಶದಲ್ಲಿ ವಶಪಡಿಸಿಕೊಂಡಿರುವುದಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ, ವಾಹನದಲ್ಲಿದ್ದ ಇಬ್ಬರನ್ನು ಬಂಧಿಸಲಾಗಿದೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ರಾಂಬನ್ ಎಸ್‌ಎಸ್‌ಪಿ ಮೊಹತಾ ಶರ್ಮಾ, "ಜಮ್ಮು ಮತ್ತು ಶ್ರೀನಗರ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಡ್ರಗ್ಸ್ ಸಾಗಾಟದ ಬಗ್ಗೆ ನಿರ್ದಿಷ್ಟ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ರೈಲ್ವೆ ಚೌಕ್ ಬನ್ಹಾಲ್ ಬಳಿ ಪೊಲೀಸ್ ಅಧಿಕಾರಿಗಳು ಖಾಸಗಿ ವಾಹನವನ್ನು ತಡೆದು ತಪಾಸಣೆ ನಡೆಸಿದರು. ಶೋಧ ಕಾರ್ಯ ನಡೆಸಿದ ವೇಳೆ ವಾಹನದಿಂದ 30 ಕೆಜಿ ಕೊಕೇನ್ ಪತ್ತೆಯಾಗಿದ್ದು, ಅದರ ಮೌಲ್ಯ ಸುಮಾರು 300 ಕೋಟಿ ರೂಪಾಯಿ ಆಗಿದೆ. ಕಾರ್ಯಾಚರಣೆ ವೇಳೆ ಇಬ್ಬರು ಆರೋಪಿಗಳನ್ನು ಸಹ ಬಂಧಿಸಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.

ಇದೊಂದು ನಾರ್ಕೋ - ಟೆರರ್ ಪ್ರಕರಣವಾಗಿದ್ದು, ಗಡಿಯಾಚೆಗಿನ ದೃಷ್ಟಿಕೋನಗಳ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ. ವಾಹನದಲ್ಲಿದ್ದ ಇಬ್ಬರನ್ನು ಎಸ್‌ಡಿಪಿಎಸ್ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳಿಂದ ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಬಂಧಿತ ಕಳ್ಳಸಾಗಣೆದಾರರು ಪಂಜಾಬ್ ಮೂಲದವರಾಗಿದ್ದು, ಜಲಂಧರ್‌ನ ಸರಬ್‌ಜೀತ್ ಸಿಂಗ್ ಮತ್ತು ಪಂಜಾಬ್‌ನ ಫಗ್ವಾರದ ಹನಿ ಬಸ್ರಾ ಎಂದು ಗುರುತಿಸಲಾಗಿದೆ ಅಂತಾ ಬನಿಹಾಲ್ ಠಾಣಾಧಿಕಾರಿ ಮೊಹಮ್ಮದ್ ಅಫ್ಜಲ್ ವಾನಿ ಮಾಹಿತಿ ನೀಡಿದರು.

ಹರಿಯಾಣ ಮೂಲದ ನೋಂದಣಿ ಸಂಖ್ಯೆಯ ವಾಹನದಲ್ಲಿ ಮಾದಕ ವಸ್ತು ಕಳ್ಳ ಸಾಗಣೆ ಮಾಡಲಾಗಿದ್ದು, ಮೊದಲು ವಾಹನ ನಿಲ್ಲಿಸಲು ಸೂಚಿಸಿದಾಗ ಕಳ್ಳಸಾಗಣೆದಾರರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಬಳಿಕ ಆರೋಪಿಗಳನ್ನು ಬೆನ್ನಟ್ಟಿದ ಪೊಲೀಸರು ಕೊನೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲು ಪತ್ತೆಯಾದ ಮಾದಕವಸ್ತುವನ್ನು ಹೆರಾಯಿನ್ ಎಂದು ನಂಬಲಾಗಿತ್ತು. ಆದರೆ, ತನಿಖೆಯ ನಂತರ ಅದು ಕೊಕೇನ್ ಎಂದು ತಿಳಿದು ಬಂದಿದೆ ಎಂದು ವಾನಿ ಹೇಳಿದರು.

ಈ ಬಗ್ಗೆ ಹೆಚ್ಚಿನ ವಿವರ ನೀಡಿದ ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಮುಖೇಶ್ ಸಿಂಗ್, "ಶನಿವಾರ ರಾತ್ರಿ 10.30 ರ ಸುಮಾರಿಗೆ ಎಸ್‌ಎಸ್‌ಪಿ ಶರ್ಮಾ ನೇತೃತ್ವದ ರಾಂಬನ್ ಪೊಲೀಸರು ಕಾಶ್ಮೀರದಿಂದ ಜಮ್ಮು ಕಡೆಗೆ ಬರುತ್ತಿದ್ದ ವಾಹನವನ್ನು ರೈಲ್ವೆ ಚೌಕ್ ಬನಿಹಾಲ್‌ನಲ್ಲಿ ತಡೆದು ಸುಮಾರು 30 ಕೆಜಿ ಕೊಕೇನ್ ವಶಪಡಿಸಿಕೊಂಡರು. ಈ ಸಂಬಂಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್) ಕಾಯ್ದೆಗೆ ಸಂಬಂಧಿಸಿದ ವಿವಿಧ ಸೆಕ್ಷನ್‌ಗಳ ಅಡಿ ಬನಿಹಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.

ರಾಂಬನ್ ಜಿಲ್ಲೆಯಲ್ಲಿ 2022 ರಲ್ಲಿ ಒಟ್ಟು 104 ಪ್ರಕರಣಗಳು (ಎನ್‌ಡಿಪಿಎಸ್ ಕಾಯ್ದೆಯಡಿ) ದಾಖಲಾಗಿದ್ದರೆ, 2023 ರಲ್ಲಿ 2,500 ಕೆಜಿ ಗಸಗಸೆ ಸ್ಟ್ರಾ, 10 ಕೆಜಿ ಹಶಿಶ್, 200 ಗ್ರಾಂ ಹೆರಾಯಿನ್ ಮತ್ತು 200 ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಮಾದಕ ದ್ರವ್ಯ ದಂಧೆಯಲ್ಲಿ ತೊಡಗಿದ್ದ 158 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಈ ಪೈಕಿ ಮೂವರನ್ನು ಎನ್‌ಡಿಪಿಎಸ್ ಅಡಿಯಲ್ಲಿ ಜೈಲಿಗೆ ಕಳುಹಿಸಲಾಗಿದೆ.

ಇದನ್ನೂ ಓದಿ :ವಿದೇಶಿ ಪ್ರಜೆಯ ಬ್ಯಾಗ್‌ನಲ್ಲಿತ್ತು 12 ಕೋಟಿ ರೂಪಾಯಿ ಮೌಲ್ಯದ ಕೊಕೇನ್! ಹೇಗೆ ಬಚ್ಚಿಟ್ಟಿದ್ದ ನೋಡಿ

ABOUT THE AUTHOR

...view details