ನವದೆಹಲಿ: ಸುಮಾರು 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತು ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್‌ಗೆ ಲಂಚ ಪಡೆಯಲು ಸಹಾಯ ಮಾಡಿದ ಆರೋಪದಲ್ಲಿ ಸುಮಾರು ಐದು ಮಂದಿ ಜೈಲು ಅಧಿಕಾರಿಗಳನ್ನು ದೆಹಲಿ ಪೊಲೀಸ್ನ ಆರ್ಥಿಕ ಅಪರಾಧಗಳ ವಿಭಾಗ ಬಂಧಿಸಿದೆ.
ಬಂಧಿತ ಜೈಲು ಅಧಿಕಾರಿಗಳನ್ನು ಸುನೀಲ್ ಕುಮಾರ್, ಸುಂದರ್ ಬೋರಾ, ಮಹೇಂದ್ರ ಪ್ರಸಾದ್, ಲಕ್ಷ್ಮೀ ದತ್ ಮತ್ತು ಪ್ರಕಾಶ್ ಚಂದ್ ಎಂದು ಗುರುತಿಸಲಾಗಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಆರ್ಥಿಕ ಅಪರಾಧಗಳ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಆರ್‌ಕೆ ಸಿಂಗ್, ಬಂಧಿತ ಜೈಲು ಅಧಿಕಾರಿಗಳು ಸುಕೇಶ್ ಚಂದ್ರಶೇಖರ್‌ಗೆ ಸಹಾಯ ಮಾಡಿದ್ದಾರೆ ಮತ್ತು ಅವರಿಂದ ಲಂಚ ಸ್ವೀಕರಿಸಿರುವ ಆರೋಪವಿದೆ ಎಂದಿದ್ದಾರೆ.
ಸುನಿಲ್ ಕುಮಾರ್ ಮತ್ತು ಸುಂದರ್ ಬೋರಾ ಜೈಲು ಸೂಪರಿಂಡೆಂಟ್ ಆಗಿದ್ದು, ಮಹೇಂದ್ರ ಪ್ರಸಾದ್ ಮತ್ತು ಪ್ರಕಾಶ್ ಚಂದ್ ಡೆಪ್ಯುಟಿ ಸೂಪರಿಂಡೆಂಟ್ ಆಗಿದ್ದಾರೆ ಎಂದು ಆರ್‌ಕೆ ಸಿಂಗ್ ಹೇಳಿದ್ದಾರೆ. ಆರ್ಥಿಕ ಅಪರಾಧಗಳ ವಿಭಾಗವು ಬಂಧಿತ ಜೈಲು ಅಧಿಕಾರಿಗಳನ್ನು ದೆಹಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನವೆಂಬರ್ 12ರವರೆಗೆ ಅವರನ್ನು ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.