ಚೆನ್ನೈ( ತಮಿಳುನಾಡು):ಇಥಿಯೋಪಿಯಾದಿಂದ ಚೆನ್ನೈಗೆ ವಿಮಾನದ ಮೂಲಕ ಭಾರಿ ಪ್ರಮಾಣದಲ್ಲಿ ಮಾದಕ ದ್ರವ್ಯ ಸಾಗಣೆಯಾಗುತ್ತಿರುವ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳಿಗೆ ಮಾಹಿತಿ ಲಭಿಸಿದೆ. ನಂತರ ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳು ಕಣ್ಗಾವಲು ತೀವ್ರಗೊಳಿಸಿದ್ದಾರೆ.
ಇಥಿಯೋಪಿಯಾದ ಅಡಿಸ್ ಅಬಾಬಾದಿಂದ ಶುಕ್ರವಾರ (ಆಗಸ್ಟ್ 12) ಚೆನ್ನೈಗೆ ಆಗಮಿಸಿದ ಎಲ್ಲ ಇಥಿಯೋಪಿಯನ್ ಏರ್‌ಲೈನ್ಸ್ ಪ್ರಯಾಣಿಕರನ್ನು ಪರಿಶೀಲಿಸಲಾಯಿತು. ಈ ವೇಳೆ, ಆಫ್ರಿಕನ್ ದೇಶಗಳ ಪ್ರಯಾಣಿಕರನ್ನು ವಿಶೇಷವಾಗಿ ಸೂಕ್ಷ್ಮವಾಗಿ ಗಮನಿಸಲಾಯಿತು. ಆದರೆ, ಅವರಿಂದ ಯಾವುದೇ ಡ್ರಗ್ಸ್ ಪತ್ತೆಯಾಗಲಿಲ್ಲ.
ಆಫ್ರಿಕಾದಿಂದ ಚೆನ್ನೈಗೆ ಬಂದಿದ್ದ ಇಕ್ಬಾಲ್ ಪಾಷಾ (38) ಎಂಬ ಭಾರತೀಯ ಪ್ರಯಾಣಿಕನ ಮೇಲೆ ಅಧಿಕಾರಿಗಳು ಅನುಮಾನಗೊಂಡು ಆತನನ್ನು ತಡೆದು ವಿಚಾರಣೆ ನಡೆಸಿದರು. ಆಗ ಆತ ಕಸ್ಟಮ್ ಅಧಿಕಾರಿಗಳಿಗೆ ಸರಿಯಾದ ಉತ್ತರ ನೀಡಲಿಲ್ಲ. ಬಳಿಕ ಪ್ರತ್ಯೇಕ ಕೊಠಡಿಗೆ ಕರೆದೊಯ್ದು ಕೂಲಂಕಷವಾಗಿ ತಪಾಸಣೆ ನಡೆಸಲಾಯಿತು.