ತಿರುಚ್ಚಿ (ತಮಿಳುನಾಡು): ವಿಮಾನ ಪ್ರಯಾಣಿಕನೊಬ್ಬನ ಮಕ್ಕಳ ಶೂಗಳು ಮತ್ತು ಒಳ ಉಡುಪಿನಲ್ಲಿ ಅಡಗಿಸಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 1,08,10,800 ರೂ. (1 ಕೋಟಿ 8 ಲಕ್ಷ) ಮೌಲ್ಯದ ಚಿನ್ನವನ್ನು ತಿರುಚ್ಚಿಯ ಏರ್ ಇಂಟೆಲಿಜೆನ್ಸ್ ಯುನಿಟ್ (ಎಐಯು) ವಶಪಡಿಸಿಕೊಂಡಿದೆ. ಪುರುಷ ಪ್ರಯಾಣಿಕನೊಬ್ಬನ ಮಕ್ಕಳು ಧರಿಸಿದ್ದ ಶೂಗಳು ಮತ್ತು ಒಳ ಉಡುಪುಗಳಲ್ಲಿ ಅಡಗಿಸಿಟ್ಟಿದ್ದ ಪೇಸ್ಟ್ ತರಹದ ವಸ್ತುವಿನಿಂದ ಕ್ರಮವಾಗಿ 1,08,10,800 ರೂ ಮೌಲ್ಯದ 24 ಕ್ಯಾರೆಟ್ ಮತ್ತು 850 ಗ್ರಾಂ ತೂಕದ ಎರಡು ದೊಡ್ಡ ಚಿನ್ನದ ತುಂಡುಗಳನ್ನು ಹೊರತೆಗೆಯಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಈ ಪ್ರಯಾಣಿಕರು ಏರ್ ಏಷ್ಯಾ ವಿಮಾನದಲ್ಲಿ (ಎಕೆ -29) ಕೌಲಾಲಂಪುರದಿಂದ ತಿರುಚ್ಚಿ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಆಗಮಿಸಿದ್ದರು.
ಮತ್ತೊಂದು ಪ್ರಕರಣದಲ್ಲಿ, ಕೌಲಾಲಂಪುರದಿಂದ ಬಂದ ಭಾರತೀಯ ಪ್ರಯಾಣಿಕನೊಬ್ಬ 61 ಲಕ್ಷ ರೂಪಾಯಿ ಮೌಲ್ಯದ 1.06 ಕೆಜಿ ತೂಕದ ಅಘೋಷಿತ ಚಿನ್ನವನ್ನು ಸಾಗಿಸುತ್ತಿದ್ದಾಗ ತಿರುಚ್ಚಿ ವಿಮಾನ ನಿಲ್ದಾಣದಲ್ಲಿ ಆತನನ್ನು ಬಂಧಿಸಲಾಗಿದೆ. ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು ತನಿಖೆ ನಡೆಯುತ್ತಿದೆ. ಇದಕ್ಕೂ ಮುನ್ನ ತಿರುಚ್ಚಿಯ ಏರ್ ಇಂಟೆಲಿಜೆನ್ಸ್ ಯುನಿಟ್ (ಎಐಯು) ಶುಕ್ರವಾರ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ 23.84 ಲಕ್ಷ ರೂ.ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದೆ.
"ಮೊದಲ ಪ್ರಕರಣದಲ್ಲಿ ಕೌಲಾಲಂಪುರದಿಂದ ಬಂದ ಪ್ರಯಾಣಿಕರೊಬ್ಬರ ಪ್ಯಾಂಟ್ ಜೇಬಿನಲ್ಲಿ ಚಿನ್ನದ ಕತ್ತರಿಸಿದ ತುಂಡನ್ನು ಅಡಗಿಸಿಡಲಾಗಿತ್ತು. ಎರಡನೇ ಮತ್ತು ಮೂರನೇ ಪ್ರಕರಣಗಳಲ್ಲಿ, ಚಿನ್ನವನ್ನು ಜೀನ್ಸ್ ಪ್ಯಾಂಟಿನ ಗುಂಡಿಗಳಾಗಿ ಅಡಗಿಸಿಡಲಾಗಿತ್ತು ಮತ್ತು ಕೌಲಾಲಂಪುರದಿಂದ ಆಗಮಿಸಿದ ಪ್ರಯಾಣಿಕ ಕಾರ್ಟನ್ ಬಾಕ್ಸ್ನಲ್ಲಿ ಸುತ್ತಿದ ಪಾರದರ್ಶಕ ಹಾಳೆಯ ಮೇಲೆ ಚಿನ್ನವನ್ನು ಸಿಂಪಡಿಸಲಾಗಿತ್ತು. 23.84 ಲಕ್ಷ ರೂ. ಮೌಲ್ಯದ ಒಟ್ಟು 401 ಗ್ರಾಂ ಚಿನ್ನವನ್ನು ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಾಗಿದೆ ಎಂದು ತಿರುಚ್ಚಿ ಕಸ್ಟಮ್ಸ್ ಡಿಸಿ ತಿಳಿಸಿದ್ದಾರೆ.
ಕೇರಳದ ಕಣ್ಣೂರು ವಿಮಾನನಿಲ್ದಾಣದಲ್ಲಿ ಚಿನ್ನ ವಶ:ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಚಿನ್ನ ಕಳ್ಳಸಾಗಣೆ ಮಾಡುವ ಪ್ರಯತ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಸತತ ಎರಡನೇ ದಿನವೂ ವಿಫಲಗೊಳಿಸಿದ್ದಾರೆ. ಶನಿವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 56.32 ಲಕ್ಷ ರೂ.ಮೌಲ್ಯದ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಕಾಸರಗೋಡಿನ ಬೇಕಲ್ ನಿವಾಸಿ ತಮ್ಜಿತ್ ಎಂದು ಗುರುತಿಸಲಾಗಿದೆ. ಈತ 973.5 ಗ್ರಾಂ ತೂಕದ ಚಿನ್ನವನ್ನು ತುಕ್ಕು ಹಿಡಿದ ಪೆಟ್ಟಿಗೆಯೊಳಗೆ ಬಚ್ಚಿಟ್ಟು ಸಾಗಿಸುತ್ತಿದ್ದನು.
ಇದನ್ನೂ ಓದಿ : ಅಫ್ಘಾನ್ ನಿರಾಶ್ರಿತರಿಗೆ ದೇಶ ತೊರೆಯುವಂತೆ ಸೂಚಿಸಿದ ಪಾಕಿಸ್ತಾನ; ನ.1ರ ನಂತರ ಗಡಿಪಾರು