ಕರ್ನಾಟಕ

karnataka

ETV Bharat / bharat

ತಂತ್ರಜ್ಞಾನವು ಸರ್ಕಾರದ ಯೋಜನೆಗಳಲ್ಲಿನ ಭ್ರಷ್ಟಾಚಾರವನ್ನು ತಡೆದಿದೆ : ಪ್ರಧಾನಿ ಮೋದಿ - 46 ಕಡೆಗಳಲ್ಲಿ ಏಕಕಾಲಕ್ಕೆ ರೋಜ್​ಗಾರ್​ ಮೇಳ

ಪ್ರಧಾನಿ ನರೇಂದ್ರ ಮೋದಿ ಅವರು ರೋಜ್​ಗಾರ್​ ಮೇಳದ ಅಡಿಯಲ್ಲಿ ಸುಮಾರು 51 ಸಾವಿರ ನೇಮಕಾರಿ ಪತ್ರಗಳನ್ನು ವಿತರಿಸಿದರು. ದೇಶಾದ್ಯಂತ ಒಟ್ಟು 46 ಕಡೆಗಳಲ್ಲಿ ಏಕಕಾಲಕ್ಕೆ ರೋಜ್​ಗಾರ್​ ಮೇಳ ನಡೆಯಿತು.

rozgar-mela-distribution-of-51000-appointment-letters-by-pm-modi
ತಂತ್ರಜ್ಞಾನವು ಸರ್ಕಾರದ ಯೋಜನೆಗಳಲ್ಲಿನ ಭ್ರಷ್ಟಾಚಾರವನ್ನು ತಡೆಗಟ್ಟಿದೆ : ಪ್ರಧಾನಿ ಮೋದಿ

By ETV Bharat Karnataka Team

Published : Sep 26, 2023, 11:08 PM IST

ನವದೆಹಲಿ :ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ರೋಜ್​ಗಾರ್​ ಮೇಳದ ಅಡಿಯಲ್ಲಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಸುಮಾರು 51,000 ನೇಮಕಾತಿ ಪತ್ರಗಳನ್ನು ವಿತರಿಸಿದರು. ಸರ್ಕಾರಿ ಇಲಾಖೆ ಮತ್ತು ವಿವಿಧ ಸಂಸ್ಥೆಗಳಲ್ಲಿ ಹೊಸದಾಗಿ ನೇಮಕಗೊಂಡವರಿಗೆ ಪತ್ರವನ್ನು ವಿತರಿಸಲಾಯಿತು. ದೇಶಾದ್ಯಂತ ಒಟ್ಟು 46 ಕಡೆಗಳಲ್ಲಿ ಏಕಕಾಲಕ್ಕೆ ರೋಜ್​ಗಾರ್​ ಮೇಳ ನಡೆಯಿತು.

ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸರ್ಕಾರಿ ಯೋಜನೆಗಳಲ್ಲಿ ತಂತ್ರಜ್ಞಾನದ ಸಮರ್ಪಕ ಬಳಕೆಯು ಭ್ರಷ್ಟಾಚಾರವನ್ನು ತಡೆ ಹಿಡಿದಿದೆ. ಈ ಮೂಲಕ ಸಾರ್ವಜನಿಕ ಸೇವೆಯಲ್ಲಿ ವಿಶ್ವಾಸಾರ್ಹತೆ ಮತ್ತು ಜನರಿಗೆ ಉತ್ತಮ ಸೌಕರ್ಯವನ್ನು ಒದಗಿಸಲು ಸಾಧ್ಯವಾಗಿದೆ. ದೇಶವು ಹೊಸ ಸಂಸತ್​ ಕಟ್ಟಡದ ಉದ್ಘಾಟನೆಯಿಂದ ಹೊಸ ಭವಿಷ್ಯಕ್ಕೆ ನಾಂದಿ ಹಾಡಿದೆ ಎಂದು ಹೇಳಿದರು. ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿದ ಬಗ್ಗೆ ಉಲ್ಲೇಖಿಸಿದ ಅವರು, ಸರ್ಕಾರದ ನೀತಿಯು ಮಹಿಳೆಯರಿಗೆ ಹೊಸ ಬಾಗಿಲುಗಳನ್ನು ತೆರೆಯುವ ನೀತಿಯಾಗಿ ಮುಂದುವರೆದಿದೆ ಎಂದು ಅಭಿಪ್ರಾಯಪಟ್ಟರು.

ರೋಜ್‌ಗಾರ್ ಮೇಳದ ಅಡಿಯಲ್ಲಿ ಹೊಸದಾಗಿ ನೇಮಕಗೊಂಡವರು, ಅಂಚೆ ಇಲಾಖೆ, ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ, ಪರಮಾಣು ಶಕ್ತಿ ಇಲಾಖೆ, ಕಂದಾಯ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.

ರೋಜ್​ಗಾರ್​ ಅಡಿಯಲ್ಲಿ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ರಾಜ್ಯ ಸರ್ಕಾರದ ಇಲಾಖೆ ಮತ್ತು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿವಿಧ ಇಲಾಖೆಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ನೇಮಕಾತಿಗೊಂಡವರು ಕರ್ಮಯೋಗಿ ಪೋರ್ಟಲ್‌ನಲ್ಲಿ ಕರ್ಮಯೋಗಿ ಪ್ರಾರಂಭ್ ಮೂಲಕ ತರಬೇತಿ ಪಡೆಯುವ ಅವಕಾಶವನ್ನು ಪಡೆಯುತ್ತಾರೆ. ಜೊತೆಗೆ ಇವರಿಗೆ 680ಕ್ಕೂ ಹೆಚ್ಚು ಇ-ಲರ್ನಿಂಗ್ ಕೋರ್ಸ್‌ಗಳಿಗೆ ಅವಕಾಶ ಪಡೆಯುತ್ತಾರೆ.

'ರೋಜ್ಗಾರ್ ಮೇಳ'ದ ಅಡಿಯಲ್ಲಿ ದೇಶದಲ್ಲಿ 10 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಒದಗಿಸುವ ಅಭಿಯಾನಕ್ಕೆ ನಾಂದಿ ಹಾಡಲಾಗಿದೆ. ಇದು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಪ್ರಧಾನ ಮಂತ್ರಿಯವರ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.

ಇದನ್ನೂ ಓದಿ :ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ 91ನೇ ಹುಟ್ಟುಹಬ್ಬ: ಮೋದಿ ಸೇರಿದಂತೆ ಗಣ್ಯರಿಂದ ಶುಭಾಶಯ

ABOUT THE AUTHOR

...view details