ಹೈದ್ರಾಬಾದ್ (ತೆಲಂಗಾಣ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇ 6 ಮತ್ತು 7ರಂದು ಎರಡು ದಿನಗಳ ತೆಲಂಗಾಣದ ಪ್ರವಾಸ ಕೈಗೊಳ್ಳಲಿದ್ದಾರೆ. ಮೇ 7ರಂದು ರಾಜಧಾನಿ ಹೈದ್ರಾಬಾದ್ನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ರಾಹುಲ್ ಸಭೆ ಆಯೋಜಿಸಲು ಕಾಂಗ್ರೆಸ್ ಮುಖಂಡರು ಮುಂದಾಗಿದ್ದಾರೆ. ಈಗ ಇದೇ ವಿಷಯವು ವಿವಾದಕ್ಕೆ ಕಾರಣವಾಗಿದ್ದು, ವಿದ್ಯಾರ್ಥಿ ಗುಂಪುಗಳ ನಡುವೆ ಗಲಾಟೆ ಸಹ ನಡೆದಿದೆ.
ಮೇ 6ರಂದು ಹನಮಕೊಂಡಕ್ಕೆ ಭೇಟಿ ನೀಡಲಿರುವ ರಾಹುಲ್ ಗಾಂಧಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮರು ದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಏರ್ಪಡಿಸಲು ನಿರ್ಧರಿಸಲಾಗಿದೆ. ಇದಕ್ಕೆ ಅನುಮತಿ ನೀಡುವಂತೆ ಕಾಂಗ್ರೆಸ್ ಮುಖಂಡರು ಮನವಿ ಮಾಡಿದ್ದಾರೆ. ತೆಲಂಗಾಣ ಪ್ರತ್ಯೇಕ ರಚನೆ ಹೋರಾಟದಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಹೋರಾಟ ಮಹತ್ವದ್ದಾಗಿದೆ. ಹಲವು ವಿದ್ಯಾರ್ಥಿಗಳು ಪ್ರಾಣ ತ್ಯಾಗ ಮಾಡಿದ್ದಾರೆ. ಈ ವಿದ್ಯಾರ್ಥಿಗಳ ಹೋರಾಟದಿಂದ ಕಾಂಗ್ರೆಸ್ ತೆಲಂಗಾಣ ಪ್ರತ್ಯೇಕ ರಾಜ್ಯವನ್ನು ರಚಿಸಿದೆ ಎಂದು ಮಾಜಿ ಸಂಸದ ಹನುಮಂತರಾವ್ ಹೇಳಿದ್ದಾರೆ.
ಎಬಿವಿಪಿ-ಟಿಆರ್ಎಸ್ವಿ ವಿರೋಧ: ವಿಶ್ವವಿದ್ಯಾಲಯದಲ್ಲಿ ರಾಹುಲ್ ಗಾಂಧಿ ಕಾರ್ಯಕ್ರಮ ಆಯೋಜನೆಗೆ ಟಿಆರ್ಎಸ್ ವಿದ್ಯಾರ್ಥಿ ವಿಭಾಗ ಮತ್ತು ಎಬಿವಿಪಿ ವಿರೋಧ ವ್ಯಕ್ತಪಡಿಸಿವೆ. ರಾಜಕೀಯ ಕಾರ್ಯಕ್ರಮಕ್ಕೆ ಅವಕಾಶ ಕೊಟ್ಟರೆ ಶೈಕ್ಷಣಿಕ ವಾತಾವರಣಕ್ಕೆ ತೊಂದರೆ ಆಗುತ್ತಿದೆ ಎಂದು ಈ ಗುಂಪುಗಳು ಆಕ್ಷೇಪ ವ್ಯಕ್ತಪಡಿಸಿವೆ. ಕ್ಯಾಂಪಸ್ಗೆ ರಾಹುಲ್ ಪ್ರವೇಶಿಸಲು ಅನುಮತಿ ನೀಡಬಾರದು ಎಂದೂ ಆಡಳಿತ ಮಂಡಳಿಗೆ ಮನವಿ ಸಲ್ಲಿಸಲಾಗಿದೆ.