ಕರ್ನಾಟಕ

karnataka

ETV Bharat / bharat

ವಿವಾದ ಸೃಷ್ಟಿಸಿದ 'ರಾಜಸ್ಥಾನ ಕಡ್ಡಾಯ ವಿವಾಹ ನೋಂದಣಿ (ತಿದ್ದುಪಡಿ) ವಿಧೇಯಕ-2021' - ರಾಜಸ್ಥಾನ ಕಡ್ಡಾಯ ವಿವಾಹ ನೋಂದಣಿ ತಿದ್ದುಪಡಿ ಮಸೂದೆ ವಿವಾದ

2009ರಲ್ಲಿ ರಾಜಸ್ಥಾನದಲ್ಲಿ ಕಡ್ಡಾಯ ವಿವಾಹ ನೋಂದಣಿ ಕಾಯ್ದೆಯನ್ನು ಪರಿಚಯಿಸಿತು. ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗ ಅದನ್ನು ತಿದ್ದುಪಡಿ ಮಾಡಿ ವಿಧಾನಸಭೆಯಲ್ಲಿ ಅಂಗೀಕರಿಸಿದೆ. ವಿವಾಹಿತ ದಂಪತಿ ಮದುವೆಯ ಕಾನೂನುಬದ್ಧ ವಯಸ್ಸನ್ನು ಪೂರ್ಣಗೊಳಿಸದಿದ್ದರೆ, ಪೋಷಕರು ಅಥವಾ ಹೆತ್ತವರು ನಿಗದಿತ ಅವಧಿಯೊಳಗೆ (30 ದಿನಗಳು) ಅರ್ಜಿಯನ್ನು ಸಲ್ಲಿಸಬೇಕು ಎಂದು ವಿಧೇಯಕ ಹೇಳುತ್ತದೆ..

Row over Marriage Registration Amendment Bill
ರಾಜಸ್ಥಾನ ಕಡ್ಡಾಯ ವಿವಾಹ ನೋಂದಣಿ

By

Published : Sep 22, 2021, 6:49 PM IST

ಜೈಪುರ/ರಾಜಸ್ಥಾನ :'ರಾಜಸ್ಥಾನ ಕಡ್ಡಾಯ ವಿವಾಹ ನೋಂದಣಿ (ತಿದ್ದುಪಡಿ) ವಿಧೇಯಕ-2021' ಬಾಲ್ಯ ವಿವಾಹಗಳನ್ನು ಕಾನೂನು ಬದ್ಧಗೊಳಿಸಲಿದೆ ಎಂದು ಮಹಿಳಾ ಮತ್ತು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಆಕ್ಷೇಪ ಎತ್ತಿದೆ.

ಗದ್ದಲದ ನಡುವೆ, ರಾಜಸ್ಥಾನ ವಿಧಾನಸಭೆಯು ಸೆಪ್ಟೆಂಬರ್ 17ರಂದು 2021ರ ಮಸೂದೆಯನ್ನು ಧ್ವನಿಮತದ ಮೂಲಕ ಅಂಗೀಕರಿಸಿ 2009ರ ಕಾಯ್ದೆಯನ್ನು ತಿದ್ದುಪಡಿ ಮಾಡಿ 30 ದಿನಗಳ ಒಳಗೆ ವಿವಾಹಗಳನ್ನು ಕಡ್ಡಾಯವಾಗಿ ನೋಂದಾಯಿಸಬೇಕು ಎಂದಿದೆ.

ಹೊಸ ಮಸೂದೆಯ ಪ್ರಕಾರ, ವಧು-ವರರು ತಾವು 30 ದಿನಗಳಿಗಿಂತ ಹೆಚ್ಚು ಕಾಲದಿಂದ ವಾಸಿಸುತ್ತಿರುವ ಸ್ಥಳದ ವಿವರ ನೀಡಿ ವಿವಾಹ ನೋಂದಣಿ ಅಧಿಕಾರಿಗೆ ಮದುವೆಯ ನೋಂದಣಿಗೆ ಅರ್ಜಿ ಸಲ್ಲಿಸಬಹುದು.

ಈ ವಿಧೇಯಕದ ಪ್ರಕಾರ, 21 ವರ್ಷಗಳನ್ನು ಪೂರೈಸದ ವರ ಮತ್ತು 18 ವರ್ಷ ತುಂಬದ ವಧುವಿನ ನಡುವಿನ ವಿವಾಹವನ್ನು ಮದುವೆಯಾದ 30 ದಿನಗಳಲ್ಲಿ ಹೆತ್ತವರು ಅಥವಾ ಪೋಷಕರು ನೋಂದಾಯಿಸಿಕೊಳ್ಳಬಹುದು ಎಂದು ಸಂಸದೀಯ ವ್ಯವಹಾರಗಳ ಸಚಿವೆ ಶಾಂತಿಕುಮಾರ್ ಧಾರಿವಾಲ್ ವಿಧಾನಸಭೆಯಲ್ಲಿ ತಿಳಿಸಿದರು.

"ಮಸೂದೆಯು ಬಾಲ್ಯ ವಿವಾಹ ಮಾನ್ಯ ಎಂದು ಹೇಳುವುದಿಲ್ಲ. ಮದುವೆಯ ನಂತರ, ನೋಂದಣಿ ಮಾತ್ರ ಅಗತ್ಯ ಎಂದು ಮಸೂದೆಯು ಹೇಳುತ್ತದೆ. ಜಿಲ್ಲಾಧಿಕಾರಿಯವರು ಬಯಸಿದರೆ ಬಾಲ್ಯ ವಿವಾಹಗಳ ವಿರುದ್ಧ ಕ್ರಮಕೈಗೊಳ್ಳಬಹುದು.

ಈ ತಿದ್ದುಪಡಿಯು ಕೇಂದ್ರ ಕಾನೂನಿಗೆ ವಿರುದ್ಧವಾಗಿಲ್ಲ. ಮದುವೆಗಳನ್ನು ಕಡ್ಡಾಯವಾಗಿ ನೋಂದಾಯಿಸಬೇಕು ಎಂದು ಸುಪ್ರೀಂಕೋರ್ಟ್ ಕೂಡ ತೀರ್ಪು ನೀಡಿದೆ. ಆದ್ದರಿಂದ ಮಸೂದೆಯು ಬಾಲ್ಯ ವಿವಾಹಗಳ ನೋಂದಣಿಯನ್ನು ಒಳಗೊಂಡಿದೆ ಎಂದು ಧರಿವಾಲ್ ಹೇಳಿದರು.

ಬಿಜೆಪಿಯ ಕಡೆಯಿಂದ, ವಿರೋಧ ಪಕ್ಷದ ನಾಯಕ ಗುಲಾಬ್ ಚಂದ್ ಕಟಾರಿಯಾ, ವಿರೋಧ ಪಕ್ಷದ ಉಪ ನಾಯಕ ರಾಜೇಂದ್ರ ರಾಥೋಡ್ ಮತ್ತು ಅಶೋಕ್ ಲಹೋಟಿ ತೀವ್ರ ಆಕ್ಷೇಪಗಳನ್ನು ಸಲ್ಲಿಸಿದರು. ಈ ಕಾನೂನು ಹಿಂದೂ ವಿವಾಹ ಕಾಯ್ದೆಗೆ ವಿರುದ್ಧವಾಗಿರುತ್ತದೆ ಮತ್ತು ರಾಜಸ್ಥಾನದಲ್ಲಿ ಬಾಲ್ಯ ವಿವಾಹವನ್ನು ಕಾನೂನುಬದ್ಧಗೊಳಿಸಲು ಇದನ್ನು ರೂಪಿಸಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದವು.

ಇದೇ ರೀತಿಯ ಆಕ್ಷೇಪವನ್ನು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR) ಕೂಡ ವ್ಯಕ್ತಪಡಿಸಿದೆ. ಆಯೋಗವು ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರಿಗೆ ಪತ್ರ ಬರೆದಿದೆ. ಈ ಕಾನೂನು ಬಾಲ್ಯ ವಿವಾಹವನ್ನು ಕಾನೂನುಬದ್ಧಗೊಳಿಸುತ್ತದೆ. ಇದು ಅಪ್ರಾಪ್ತ ವಯಸ್ಕರ ಆರೋಗ್ಯ ಮತ್ತು ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಕಳವಳ ವ್ಯಕ್ತಪಡಿಸಿದೆ.

ಆದಾಗ್ಯೂ, ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ ಅಧ್ಯಕ್ಷೆ ಸಂಗೀತಾ ಬೇನಿವಾಲ್, ಈ ಕಾನೂನು ಬಾಲ್ಯ ವಿವಾಹವನ್ನು ಪ್ರೋತ್ಸಾಹಿಸುವುದಿಲ್ಲ, ಸರ್ಕಾರದ ಸೌಲಭ್ಯಗಳನ್ನು ಜನರಿಗೆ ನೀಡುವುದು ಸರ್ಕಾರದ ಉದ್ದೇಶವಾಗಿದೆ, ಆದರೆ ಯಾವುದೇ ತಪ್ಪು ಕಲ್ಪನೆ ಇದ್ದರೆ ಅದನ್ನು ತೆಗೆದುಹಾಕಲು ಆಯೋಗವು ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ ಎಂದಿದ್ದಾರೆ.

ಏನಿದು ರಾಜಸ್ಥಾನ ಕಡ್ಡಾಯ ವಿವಾಹ ನೋಂದಣಿ (ತಿದ್ದುಪಡಿ) ವಿಧೇಯಕ, 2021

2009ರಲ್ಲಿ ರಾಜಸ್ಥಾನದಲ್ಲಿ ಕಡ್ಡಾಯ ವಿವಾಹ ನೋಂದಣಿ ಕಾಯ್ದೆಯನ್ನು ಪರಿಚಯಿಸಿತು. ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗ ಅದನ್ನು ತಿದ್ದುಪಡಿ ಮಾಡಿ ವಿಧಾನಸಭೆಯಲ್ಲಿ ಅಂಗೀಕರಿಸಿದೆ. ವಿವಾಹಿತ ದಂಪತಿ ಮದುವೆಯ ಕಾನೂನುಬದ್ಧ ವಯಸ್ಸನ್ನು ಪೂರ್ಣಗೊಳಿಸದಿದ್ದರೆ, ಪೋಷಕರು ಅಥವಾ ಹೆತ್ತವರು ನಿಗದಿತ ಅವಧಿಯೊಳಗೆ (30 ದಿನಗಳು) ಅರ್ಜಿಯನ್ನು ಸಲ್ಲಿಸಬೇಕು ಎಂದು ವಿಧೇಯಕ ಹೇಳುತ್ತದೆ.

ಪ್ರಸ್ತಾವಿತ ಕಾನೂನಿನ ಪ್ರಕಾರ, ಮದುವೆಯ ಸಮಯದಲ್ಲಿ ಹುಡುಗಿಯ ವಯಸ್ಸು 18 ವರ್ಷಕ್ಕಿಂತ ಕಡಿಮೆಯಿದ್ದರೆ ಮತ್ತು ಹುಡುಗನ ವಯಸ್ಸು 21 ವರ್ಷಕ್ಕಿಂತ ಕಡಿಮೆಯಿದ್ದರೆ, ಪೋಷಕರು ಅಥವಾ ಪಾಲಕರು ನಿಗದಿತ ಅವಧಿಯಲ್ಲಿ ನೋಂದಣಿ ಅಧಿಕಾರಿಗೆ ತಿಳಿಸಬೇಕು. ಮೊದಲು ಈ ನೋಂದಣಿಯನ್ನು ಜಿಲ್ಲಾ ಮಟ್ಟದಲ್ಲಿ ಮಾಡಲಾಗುತ್ತಿತ್ತು, ಆದರೆ ಈಗ ಮದುವೆ ನೋಂದಣಿಯನ್ನು ಬ್ಲಾಕ್ ಮಟ್ಟದಲ್ಲಿ ಮಾತ್ರ ಮಾಡಬಹುದಾಗಿದೆ.

ಈ ಮಸೂದೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಾಮಾಜಿಕ ಕಾರ್ಯಕರ್ತೆ ಮತ್ತು ಬಾಲ್ಯವಿವಾಹದಿಂದ ಬದುಕುಳಿದ ಭಾಗ್ಯಶ್ರೀ ಸೈನಿ, "ನಾವು ಸಮಾಜದಿಂದ ಕೆಟ್ಟದ್ದನ್ನು ತೆಗೆದುಹಾಕುತ್ತಿದ್ದೇವೆಯೇ ಅಥವಾ ಅವುಗಳನ್ನು ಪುನಃ ಜಾರಿಗೊಳಿಸಲು ಮುಂದಾಗುತ್ತಿದ್ದೇವೆಯೇ? ಎಂದು ಪ್ರಶ್ನಿಸಿದ್ದಾರೆ. 2006ರ ಕಾಯ್ದೆ ಪ್ರಕಾರ ಬಾಲ್ಯ ವಿವಾಹವು ಶಿಕ್ಷಾರ್ಹ ಅಪರಾಧ. ಬಾಲ್ಯ ವಿವಾಹದಲ್ಲಿ ಭಾಗಿಯಾಗಿರುವವರು ಮತ್ತು ಈ ವಿವಾಹದಲ್ಲಿ ಭಾಗವಹಿಸುವವರು ತಪ್ಪಿತಸ್ಥರು, ಅವರಿಗೆ ಜೈಲು ಶಿಕ್ಷೆ ವಿಧಿಸಬಹುದು. ಆದರೆ ಈ ಹೊಸ ಕಾನೂನು ಬಾಲ್ಯವಿವಾಹ ನಡೆದರೂ ಅದನ್ನು ನೋಂದಾಯಿಸಬಹುದು ಎಂದು ಹೇಳುತ್ತದೆ.

"ಕರ್ನಾಟಕದಂತಹ ರಾಜ್ಯಗಳು 2017ರಲ್ಲಿ ಬಾಲ್ಯವಿವಾಹವೆಂಬ ಅನಿಷ್ಟ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದುಹಾಕಿವೆ. ಆದರೆ ರಾಜಸ್ಥಾನವು ಅಂತಹ ಮದುವೆಗಳಿಗೆ ಕಾನೂನು ಮಾನ್ಯತೆ ನೀಡುವ ಮಾರ್ಗಗಳನ್ನು ಕಂಡುಕೊಳ್ಳುತ್ತಿದೆ" ಎಂದು ಸೈನಿ ಹೇಳಿದರು.

ABOUT THE AUTHOR

...view details