ನವದೆಹಲಿ: ವಿವಾದಿತ ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜೈಲು ಸೇರಿರುವ ಆಮ್ ಆದ್ಮಿ ಪಕ್ಷದ ನಾಯಕ, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ತಮ್ಮ ವೇತನ ಪಡೆಯಲು ಹೊಸ ಬ್ಯಾಂಕ್ ಖಾತೆ ತೆರೆಯಲು ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯ ಶುಕ್ರವಾರ ಅನುಮತಿ ನೀಡಿದೆ. ಅಲ್ಲದೇ, ಈ ಖಾತೆಯಿಂದ ಹಣವನ್ನು ಹಿಂಪಡೆಯಲು ನ್ಯಾಯಾಲಯದ ಅನುಮತಿ ಪಡೆಯಬೇಕಾಗಿಲ್ಲ ಎಂದು ಕೋರ್ಟ್ ತಿಳಿಸಿದೆ.
ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಹಾಗೂ ಜಾರಿ ನಿರ್ದೇಶನಾಲಯದ (ಇಡಿ) ತನಿಖೆ ಎದುರಿಸುತ್ತಿದ್ದಾರೆ. ಸದ್ಯ ನ್ಯಾಯಾಂಗ ಬಂಧನದಲ್ಲಿ ಸಿಸೋಡಿಯಾ ಅವರ ಅಸ್ತಿತ್ವದಲ್ಲಿರುವ ಬ್ಯಾಂಕ್ ಖಾತೆಯನ್ನು ಇಡಿ ವಶಪಡಿಸಿಕೊಂಡಿದೆ. ಆದ್ದರಿಂದ ತಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.
ಹೀಗಾಗಿ ತಮ್ಮ ಹಣ ಪಡೆಯಲು ಅನುಮತಿ ನೀಡಬೇಕೆಂದು ಸಿಸೋಡಿಯಾ ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ಪಟ್ಪರ್ ಗಂಜ್ ಕ್ಷೇತ್ರದ ಹಾಲಿ ಶಾಸಕರಾಗಿರುವ ಸಿಸೋಡಿಯಾ ಅವರಿಗೆ ತಮ್ಮ ಶಾಸಕರ ವೇತನ ಪಡೆಯಲು ಹೊಸ ಬ್ಯಾಂಕ್ ಪಡೆಯಲು ನ್ಯಾಯಾಧೀಶ ಎಂ.ಕೆ.ನಾಗ್ಪಾಲ್ ಅವರು ಅನುಮತಿ ನೀಡಿದರು. ಜೊತೆಗೆ ಹೊಸ ಬ್ಯಾಂಕ್ ಖಾತೆ ತೆರೆಯಲು ನ್ಯಾಯಾಲಯದ ಅನುಮತಿ ಅಗತ್ಯವಿಲ್ಲ. ಆದರೆ, ಅವರ ಹೆಸರಿನಲ್ಲಿ ಹೊಸ ಖಾತೆ ತೆರೆಯಲು ಕೆಲವು ದಾಖಲೆಗಳ ಮೇಲೆ ನ್ಯಾಯಾಲಯದ ದೃಢೀಕರಣದ ಅಡಿಯಲ್ಲಿ ಸಹಿಯನ್ನು ಪಡೆಯಲು ಅನುಮತಿಸಲಾಗಿದೆ ಎಂದು ನ್ಯಾಯಾಧೀಶರು ತಿಳಿಸಿದರು. ಸೆಪ್ಟೆಂಬರ್ 22ಕ್ಕೆ ಮುಂದಿನ ವಿಚಾರಣೆಯನ್ನು ಮುಂದೂಡಿದರು.