ನವದೆಹಲಿ: 90 ರೋಹಿಂಗ್ಯಾ ನಿರಾಶ್ರಿತರು ಮತ್ತು ಮೂವರು ಬಾಂಗ್ಲಾದೇಶದ ಸಿಬ್ಬಂದಿಯನ್ನು ಹೊತ್ತು ಸಂಚರಿಸುತ್ತಿರುವ ದೋಣಿ ಇಂದು ಭಾರತದ ಪ್ರಾದೇಶಿಕ ನೀರಿನಲ್ಲಿ ಕಂಡು ಬಂದಿದೆ. ಈ ಹಿನ್ನೆಲೆ ಯುಎನ್ ಏಜೆನ್ಸಿಗಳು ಮತ್ತು ಮಾನವೀಯ ಗುಂಪುಗಳಿಂದ ತಕ್ಷಣದ ರಕ್ಷಣೆಗೆ ಒತ್ತಾಯಿಸಲಾಗಿದೆ.
ಫೆಬ್ರವರಿ 11 ರಂದು ರೋಹಿಂಗ್ಯಾಗಳು ಬಾಂಗ್ಲಾದೇಶದ ಕಡಲತೀರದ ಪಟ್ಟಣವಾದ ಕಾಕ್ಸ್ ಬಜಾರ್‌ನ ದಕ್ಷಿಣಕ್ಕೆ ದೋಣಿ ಏರಿದ್ದಾರೆ. ಆದರೆ, ದೋಣಿಯ ಇಂಜಿನ್ ತುಂಡಾದ ಪರಿಣಾಮ ಆಗ್ನೇಯ ಏಷ್ಯಾದತ್ತ ದೋಣಿ ಸಾಗಿದೆ ಎಂದು ಥಾಯ್ಲೆಂಡ್ ಮೂಲದ ಅರಾಕನ್ ಪ್ರಾಜೆಕ್ಟ್ ನ ನಿರ್ದೇಶಕ ಕ್ರಿಸ್ ಲೆವಾ ಮಾಹಿತಿ ನೀಡಿದ್ದಾರೆ.
ಆತಿಥೇಯ ರಾಷ್ಟ್ರಗಳಲ್ಲಿ ಅಥವಾ ಸಮುದ್ರದಲ್ಲಿ ಸಿಲುಕುವ ನಿರಾಶ್ರಿತರಿಗೆ ಪರಿಹಾರವನ್ನು ಒದಗಿಸಲು ತನ್ನ ಮಾನವೀಯ ಗುಣದ ಮೂಲಕ ರೋಹಿಂಗ್ಯಾಗಳೊಂದಿಗೆ ದೀರ್ಘಕಾಲದ ಒಡನಾಟವನ್ನು ಹೊಂದಿರುವ ಲೆವಾ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನು ಈ 90 ನಿರಾಶ್ರಿತರಲ್ಲಿ ಎಂಟು ಮಂದಿ ಈಗಾಗಲೇ ಸಾವಿಗೀಡಾಗಿದ್ದಾರೆ ಎಂದು ಹೇಳಿದರು.
ಅವರಿಗೆ ಕುಡಿಯುವ ನೀರು ಅಥವಾ ತಿನ್ನಲು ಆಹಾರ ಉಳಿದಿಲ್ಲವಾದ್ದರಿಂದ ಬೇರೆ ದಾರಿ ಇಲ್ಲದೇ ಸಮುದ್ರದ ನೀರನ್ನು ಕುಡಿಯುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಕೆಲವರು ಸಾವಿಗೀಡಾಗಿದ್ದಾರೆ. ಅಂಡಮಾನ್‌ನಲ್ಲಿರುವ ಭಾರತೀಯ ನೌಕಾಪಡೆ ಅಥವಾ ಕರಾವಳಿ ಕಾವಲುಗಾರರು ಮಾತ್ರ ಅವರನ್ನು ಉಳಿಸಬಲ್ಲರು ಎಂದು ಕ್ರಿಸ್ ಲೆವಾ ಹೇಳಿದ್ದಾರೆ. ಇನ್ನು "ಭಾರಿ ಮಾನವೀಯ ಬಿಕ್ಕಟ್ಟು" ಬಗ್ಗೆ ತಮ್ಮ ಸಂಘಟನೆಯು ಯುಎನ್‌ಹೆಚ್‌ಸಿಆರ್ ಮತ್ತು ಢಾಖಾದ ಪಾಶ್ಚಿಮಾತ್ಯ ರಾಯಭಾರ ಕಚೇರಿಗಳಿಗೆ ಮಾಹಿತಿ ನೀಡಿದೆ.