ನವದೆಹಲಿ:2002 ರ ಗುಜರಾತ್ ಗಲಭೆ, ಕರ್ನಾಟಕದ 17 ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಪ್ರಕರಣದಲ್ಲಿ ವಾದಿಸಿದ್ದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರು ಮತ್ತೆ ಭಾರತ ಸರ್ಕಾರದ ಉನ್ನತ ವಕೀಲ ಹುದ್ದೆಯನ್ನು ಅಲಂಕರಿಸಲು ನಿರಾಕರಿಸಿದ್ದಾರೆ.
ಪ್ರಸ್ತುತ ಅಟಾರ್ನಿ ಜನರಲ್ ಆಗಿರುವ ವೇಣುಗೋಪಾಲ್ ಅವರ ಅವಧಿ ಇದೇ ಸೆಪ್ಟೆಂಬರ್ 30ಕ್ಕೆ ಪೂರ್ಣಗೊಳ್ಳಲಿದ್ದು, ಹಿರಿಯ ವಕೀಲ ಮುಕುಲ್ ರೋಹಟಗಿ ಅವರನ್ನು ಮತ್ತೆ ಅಟಾರ್ನಿ ಜನರಲ್ ಆಗಲು ಕೇಂದ್ರ ಸರ್ಕಾರ ಪ್ರಸ್ತಾಪ ಸಲ್ಲಿಸಿತ್ತು. ಆದರೆ, ಇದನ್ನು ರೋಹಟಗಿ ಅವರು ತಿರಸ್ಕರಿಸಿದ್ದಾರೆ.
ಕೇಂದ್ರ ಸರ್ಕಾರದ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕೆ ರೋಹಟಗಿ ಅವರು ಯಾವುದೇ ಕಾರಣ ನೀಡಿಲ್ಲ. ಈ ಮೊದಲು ಅವರು ಸರ್ಕಾರದ ಪ್ರಸ್ತಾಪವನ್ನು ಒಪ್ಪಿದ್ದರೂ, ಬಳಿಕ ನಿರಾಕರಣೆ ಮಾಡಿದ್ದಾರೆ. ಹಿರಿಯ ವಕೀಲ ಮುಕುಲ್ ರೋಹಟಗಿ ಅವರು 2014 ರಿಂದ 2017 ರವರೆಗೆ ಅಟಾರ್ನಿ ಜನರಲ್ ಆಗಿ ಕೆಲಸ ಮಾಡಿದ್ದರು.