ಗುವಾಹಟಿ (ಅಸ್ಸೋಂ):ಮನೆಗಳ್ಳತನ ಹಾಗೂ ಮೊಬೈಲ್ ಕಳ್ಳತನದ ಘಟನೆಗಳು ಹೆಚ್ಚುತ್ತಿರುವ ನಡುವೆ ಕೆಲ ಖದೀಮರು ಅಸ್ಸೋಂದಲ್ಲಿ ಉನ್ನತ ಪೊಲೀಸ್ ಅಧಿಕಾರಿಯ ಮೊಬೈಲ್ಅನ್ನೇ ಕಸಿದುಕೊಂಡು ಪರಾರಿಯಾಗಿದ್ದಾರೆ. ರಾಜ್ಯ ರಾಜಧಾನಿ ಗುವಾಹಟಿಯಲ್ಲಿ ಭಾನುವಾರ ವಾಕಿಂಗ್ ಮಾಡುತ್ತಿದ್ದಾಗ ಈ ಹಿರಿಯ ಪೊಲೀಸ್ ಅಧಿಕಾರಿಯ ಮೊಬೈಲ್ಅನ್ನು ಕಳ್ಳರು ಎಗರಿಸಿದ್ದಾರೆ.
ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪ ಮಹಾನಿರೀಕ್ಷಕ (ಡಿಐಜಿ) ವಿವೇಕ್ ರಾಜ್ ಸಿಂಗ್ ಅವರೇ ಮೊಬೈಲ್ ಕಳೆದುಕೊಂಡ ಉನ್ನತ ಪೊಲೀಸ್ ಅಧಿಕಾರಿಯಾಗಿದ್ದಾರೆ. ಇಲ್ಲಿನ ಉಲುಬಾರಿ ವಸತಿ ಪ್ರದೇಶದಲ್ಲಿ ತಮ್ಮ ದಿನನಿತ್ಯದ ವಾಕಿಂಗ್ಗೆ ಬಂದಿದ್ದರು. ಈ ವೇಳೆ, ಕೆಲ ಕಳ್ಳರು ಬಂದು ಡಿಐಜಿ ಸಿಂಗ್ ಅವರನ್ನು ತಡೆದು ನಿಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಏನಾಗುತ್ತಿದೆ ಎಂದು ಡಿಐಜಿ ಅರಿತುಕೊಳ್ಳುವರಷ್ಟಲ್ಲೇ ಅವರ ಸೆಲ್ ಫೋನ್‌ಅನ್ನು ಕಿತ್ತುಕೊಂಡು ಖದೀಮರು ಪರಾರಿಯಾಗಿದ್ದಾರೆ.
ಈ ಘಟನೆಯಲ್ಲಿ ಉನ್ನತ ಪೊಲೀಸ್ ಅಧಿಕಾರಿ, ಅದರಲ್ಲೂ ಕಾನೂನು ಮತ್ತು ಸುವ್ಯವಸ್ಥೆಯ ಡಿಐಜಿ ಅವರನ್ನೇ ಚಾಲಾಕಿ ಕಳ್ಳರು ಯಾಮಾರಿಸಿದ್ದಾರೆ. ಅಲ್ಲದೇ, ಡಿಐಜಿ ಅವರ ಸ್ವಂತ ವಸತಿ ಪ್ರದೇಶದಲ್ಲೇ ಮೊಬೈಲ್ ಎಗರಿಸಿದ್ದು, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ಭದ್ರತೆಯ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ತನಿಖೆ ಆರಂಭಿಸಿದ ಪೊಲೀಸರು: ಡಿಐಜಿ ವಿವೇಕ್ ರಾಜ್ ಸಿಂಗ್ ಅವರ ಮೊಬೈಲ್ ದೋಚಿರುವ ಬಗ್ಗೆ ಗುವಾಹಟಿ ಪೊಲೀಸರು ಕೂಲಂಕಷ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಮೊಬೈಲ್ ಕದ್ದ ಆರೋಪಿಗಳ ಬಂಧನ ಮತ್ತು ಫೋನ್ ಪತ್ತೆ ಹಚ್ಚಲು ತನಿಖೆ ಕಾರ್ಯ ಶುರು ಮಾಡಿದ್ದಾರೆ. ಮತ್ತೊಂದೆಡೆ, ಈ ಹಿಂದೆ ಹಿರಿಯ ಪೊಲೀಸ್ ಅಧಿಕಾರಿಯ ಮನೆಯಲ್ಲಿ ಕಳ್ಳತನದ ಘಟನೆ ಸಹ ವರದಿಯಾಗಿತ್ತು. ಈ ಘಟನೆಯ ನಡೆದ ಕೆಲವೇ ದಿನಗಳಲ್ಲಿ ಡಿಐಜಿ ಸಿಂಗ್ ಅವರ ಮೊಬೈಲ್ಅನ್ನು ಕಳ್ಳರು ಎಗರಿಸಿದ್ದಾರೆ.
ಇತ್ತೀಚೆಗೆ ಇಂಟೆಲಿಜೆನ್ಸ್ ಬ್ಯೂರೋ (ಐಬಿ) ನಿರ್ದೇಶಕರಾಗಿರುವ ಹಿರಿಯ ಪೊಲೀಸ್ ಅಧಿಕಾರಿ ತಪನ್ ಕುಮಾರ್ ದೇಕಾ ಅವರ ನಿವಾಸಕ್ಕೆ ಕಳ್ಳರು ನುಗ್ಗಿದ್ದರು. ಈ ಘಟನೆ ನಡೆದಾಗ ಅಧಿಕಾರಿ ದೇಕಾ ಮನೆಯಲ್ಲಿ ಇರಲಿಲ್ಲ. ಆದರೆ, ಮೇಲಿಂದ ಮೇಲೆ ನಡೆದ ಈ ಘಟನೆಗಳಿಂದ ಉನ್ನತ ಮಟ್ಟದ ಅಧಿಕಾರಿಗಳನ್ನೂ ಕಳ್ಳರು ಬಿಡುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಗುವಾಹಟಿ ನಗರದಾದ್ಯಂತ ಭದ್ರತಾ ಕ್ರಮಗಳನ್ನು ಹೆಚ್ಚಿಸುವುದು ಪೊಲೀಸರಿಗೆ ಅಗತ್ಯವಾಗಿದೆ.
ಸದ್ಯ ಇಡೀ ಪ್ರದೇಶದಲ್ಲಿ ಹೈಅಲರ್ಟ್ ಮಾಡಲಾಗಿದೆ. ನಾಗರಿಕರು ಜಾಗರೂಕರಾಗಿರಬೇಕು. ಈ ಘಟನೆಗಳ ತನಿಖೆಯಲ್ಲಿ ಪೊಲೀಸರಿಗೆ ಸಹಾಯ ಮಾಡಲು ಯಾವುದೇ ಅನುಮಾನಾಸ್ಪದ ಚಟುವಟಿಕೆಯ ಬಗ್ಗೆ ಮಾಹಿತಿ ನೀಡುವಂತೆ ಜನರಿಗೆ ವಿನಂತಿಸಲಾಗಿದೆ. ಸಾರ್ವಜನಿಕರು ಮತ್ತು ಕಾನೂನು ಜಾರಿ ಅಧಿಕಾರಿಗಳ ಸುರಕ್ಷತೆ ಮತ್ತು ಭದ್ರತೆಯು ಅತ್ಯಂತ ಮಹತ್ವದ್ದಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:Kalaburagi crime: ಪಿಎಸ್ಐ ಸರ್ವಿಸ್ ಗನ್ ಕಸಿದುಕೊಂಡು ಪರಾರಿಯಾದ ಕುಖ್ಯಾತ ಕಳ್ಳ: ಮರವೇರಿ ಕುಳಿತಿದ್ದ ಭೂಪನನ್ನು ಮನವೊಲಿಸಿ ಬಂಧಿಸಿದ ಪೊಲೀಸರು