ಸಾಗರ್(ಮಧ್ಯಪ್ರದೇಶ):ಅಂತಾರಾಷ್ಟ್ರೀಯ ದರೋಡೆಕೋರರ ಗ್ಯಾಂಗ್ವೊಂದು ಮೊಬೈಲ್ ತುಂಬಿಕೊಂಡು ಹೊರಟಿದ್ದ ಕಂಟೈನರ್ ತಡೆದು, 12 ಕೋಟಿ ರೂಪಾಯಿ ಮೌಲ್ಯದ ಮೊಬೈಲ್ ದರೋಡೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಕೃತ್ಯ ನಡೆದ ಕೇವಲ 24 ಗಂಟೆಯೊಳಗೆ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೊಬೈಲ್ ಫೋನ್ಗಳ ಬಾಕ್ಸ್ ತುಂಬಿಕೊಂಡು ತಮಿಳುನಾಡಿನಿಂದ ಹರಿಯಾಣದ ಗುರುಗ್ರಾಮಕ್ಕೆ ಕಂಟೈನರ್ ಹೊರಟಿತ್ತು. ಈ ವೇಳೆ, ಮಧ್ಯಪ್ರದೇಶದ ಸಾಗರ್ ಎಂಬಲ್ಲಿ ನಾಲ್ವರು ದರೋಡೆಕೋರರು ಕಳ್ಳತನ ಮಾಡಿದ್ದಾರೆ. 12 ಕೋಟಿ ರೂಪಾಯಿ ಮೌಲ್ಯದ ಮೊಬೈಲ್ ಬಾಕ್ಸ್ಗಳನ್ನು ಇನ್ನೊಂದು ಲಾರಿಗೆ ತುಂಬಿಕೊಂಡು ಪರಾರಿಯಾಗಿದ್ದರು. ಇದರ ಬಗ್ಗೆ ಮಾಹಿತಿ ಪೊಲೀಸರಿಗೆ ಗೊತ್ತಾಗುತ್ತಿದ್ದಂತೆ ಕಳ್ಳರಿಗೆ ಬಲೆ ಬೀಸಿದ್ದರು. ಗಡಿ ಜಿಲ್ಲೆ ಹಾಗೂ ಇತರೆ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿದೆ. ಈ ವೇಳೆ ಮಧ್ಯಪ್ರದೇಶದ ಇಂದೋರ್ನ ಶಿಪ್ರಾ ಎಂಬಲ್ಲಿ ವಾಹನ ತಪಾಸಣೆ ವೇಳೆ ಲಾರಿ ಸಿಕ್ಕಿಬಿದ್ದಿದೆ. ಇದರ ಬೆನ್ನಲ್ಲೇ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಇದನ್ನೂ ಓದಿ:ಲಾರಿ ಅಡ್ಡಗಟ್ಟಿ 6 ಕೋಟಿ ರೂ. ಮೌಲ್ಯದ ಮೊಬೈಲ್ಗಳ ಕಳ್ಳತನ: ಖದೀಮರಿಗೆ ಬಲೆ ಬೀಸಿದ ಪೊಲೀಸರು
ಘಟನೆಯ ಸಂಪೂರ್ಣ ವಿವರ:ಆಗಸ್ಟ್ 25ರಂದು ಮಧ್ಯಾಹ್ನ 1 ಗಂಟೆಗೆ ಪ್ರತಿಷ್ಠಿತ ಕಂಪನಿಯ ಮೊಬೈಲ್ ತುಂಬಿಕೊಂಡು ತಮಿಳುನಾಡಿನಿಂದ ಗುರುಗ್ರಾಮಗೆ ಕಂಟೈನರ್ ತೆರಳುತ್ತಿತ್ತು. ಈ ವೇಳೆ ಮಹಾರಾಜಪುರದಿಂದ ನಗರ ತಿರಹಾ ನಡುವಿನ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ದರೋಡೆಕೋರರು ತಡೆದು, ಮೊಬೈಲ್ ಕದ್ದಿದ್ದಾರೆ. ಸುದ್ದಿ ತಿಳಿದ ತಕ್ಷಣವೇ ಸಿನಿಮೀಯ ರೀತಿಯಲ್ಲಿ ತನಿಖೆ ಆರಂಭಿಸಿರುವ ಪೊಲೀಸರು ವಿವಿಧ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿದ್ದಾರೆ.
ಇದರ ಬೆನ್ನಲ್ಲೇ ಇಂದೋರ್ ಬಳಿಯ ಶಿಪ್ರಾ ಬಳಿಕ ಕದ್ದ ಸರಕುಗಳ ವಾಹನ ಪತ್ತೆಯಾಗಿದ್ದು, ಆರೋಪಿಗಳು ಲಾರಿ ಬಿಟ್ಟು ಪರಾರಿಯಾಗಿದ್ದಾರೆ. ಲಾರಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಮೊಬೈಲ್ ತುಂಬಿದ್ದ ಕಂಟೈನರ್ ಅನ್ನು ಪಶ್ಚಿಮ ಬಂಗಾಳದ ಚಾಲಕ ಮಿಥುನ್ ಎಂಬಾತ ತೆಗೆದುಕೊಂಡು ಹೋಗುತ್ತಿದ್ದನು. ಘಟನೆಗೆ ಸಂಬಂಧಿಸಿದಂತೆ ಗೌರ್ಜಾಮರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಇದರ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ.