ಭಟಿಂಡಾ:ಪಂಜಾಬ್ನಲ್ಲಿ ಕಾನೂನು ಸುವ್ಯವಸ್ಥೆ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಆರೋಪಿಗಳ ಕುಕೃತ್ಯಗಳು ಎಗ್ಗಿಲ್ಲದೇ ಸಾಗುತ್ತಿವೆ. ಅದು ಎಷ್ಟರಮಟ್ಟಿಗೆ ಅಂದ್ರೆ, ರಕ್ಷಣೆ ನೀಡುವ ಪೊಲೀಸರ ಮೇಲೆಯೇ ದುಷ್ಕರ್ಮಿಗಳು ದಾಳಿ ಮಾಡುವ ಹಂತಕ್ಕೆ ಹೋಗಿದ್ದಾರೆ. ಇಂಥದ್ದೊಂದು ಘಟನೆ ಭಟಿಂಡಾ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.
ಭಟಿಂಡಾದ ಸಂಗತ್ಮಂಡಿ ಪ್ರದೇಶದಲ್ಲಿ ದರೋಡೆ ನಡೆಸಿದ್ದ ಆರೋಪಿಗಳನ್ನು ಸೆರೆ ಹಿಡಿಯಲು ಹೋದಾಗ ಪೊಲೀಸರ ಮೇಲೆಯೇ ದುಷ್ಕರ್ಮಿಗಳು ದಾಳಿ ನಡೆಸಿ, ಓರ್ವ ಸಿಬ್ಬಂದಿಯ ಕೈಯನ್ನು ಕತ್ತರಿಸಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಏನಾಯ್ತು?:ಭಟಿಂಡಾ ಜಿಲ್ಲೆಯ ಸಂಗತ್ ಮಂಡಿ ವ್ಯಾಪ್ತಿಯ ಕಲ್ಜರಾಣಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರನ್ನು ದರೋಡೆಕೋರರು ಲೂಟಿ ಮಾಡಿದ್ದರು. ಅಳುತ್ತಾ ಕುಳಿತಿದ್ದ ವ್ಯಕ್ತಿಯನ್ನು ಪೊಲೀಸರು ಕಂಡು ವಿಚಾರಿಸಿದಾಗ ದುಷ್ಕೃತ್ಯದ ಬಗ್ಗೆ ಮಾಹಿತಿ ಸಿಕ್ಕಿದೆ. ತಕ್ಷಣವೇ ಕಾರ್ಯಾಚರಣೆ ನಡೆಸಿದ ಪೊಲೀಸರು, ದರೋಡೆಕೋರರನ್ನು ಬೆನ್ನತ್ತಿ ಹೋಗಿದ್ದಾರೆ.
ಕಳ್ಳರನ್ನು ಹಿಡಿಯಲು ವಾಹನ ಬೆನ್ನತ್ತಿ ಹಿಡಿಯಲು ಹೋದಾಗ, ಈ ವೇಳೆ ತಿರುಗಿ ಬಿದ್ದ ದರೋಡೆಕೋರರು ಪೊಲೀಸರ ಮೇಲೆಯೇ ಮರು ದಾಳಿ ಮಾಡಿದ್ದಾರೆ. ಇದರಲ್ಲಿ ಓರ್ವ ಪೊಲೀಸ್ ಸಿಬ್ಬಂದಿಯು ಕೈ ಕತ್ತರಿಸಿದ್ದಾರೆ. ತೀವ್ರ ರಕ್ತಸ್ರಾವವಾಗಿ ಸಿಬ್ಬಂದಿ ನೆಲಕ್ಕುರುಳಿದ್ದಾರೆ. ಬಳಿಕ ದುಷ್ಕರ್ಮಿಗಳು ಅವರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.