ಗುರಿ ತಲುಪುತ್ತೇವೆ ಎಂಬ ಸಂತಸದ ಭರವಸೆಯೊಂದಿಗೆ ನಮ್ಮ ಪ್ರತಿಯೊಂದು ಪಯಣವೂ ಪ್ರಾರಂಭವಾಗುತ್ತದೆ. ಹೀಗಿರುವಾಗ, ಅಂತಹ ಒಂದು ಪ್ರಯಾಣದ ಸಮಯದಲ್ಲಿ ನಮ್ಮ ಬದುಕೇ ಕೊನೆಯಾಗುವುದಕ್ಕಿಂತ ದೊಡ್ಡ ದುರಂತ ಇನ್ನೊಂದಿದೆಯೆ? ರಸ್ತೆ ಅಪಘಾತವು ದೇಶದಲ್ಲಿ ಲಕ್ಷಾಂತರ ಕುಟುಂಬಗಳನ್ನು ನಾಶ ಮಾಡುತ್ತಿರುವುದರಿಂದ ರಸ್ತೆ ಸುರಕ್ಷತೆ ಎಂಬುದು ನಮ್ಮ ದೇಶದಲ್ಲಿ ಕೇವಲ ಒಂದು ಹುಸಿ ಆದರ್ಶವೇನೋ ಎಂದು ಅನಿಸತೊಡಗಿದೆ.
ಈ ಪರಿಸ್ಥಿತಿಯ ಮುಂದುವರಿಕೆಯೇನೋ ಎಂಬಂತೆ ಇತ್ತೀಚೆಗೆ ಆಂಧ್ರಪ್ರದೇಶದ ಅರಕು ಎಂಬ ಪ್ರವಾಸಿ ತಾಣಕ್ಕೆ ಭೇಟಿ ನೀಡಿ ಹಿಂದಿರುಗುತ್ತಿದ್ದ ಬಸ್ಸೊಂದು ವಿಶಾಖಪಟ್ಟಣಂ ಬಳಿ ಅಪಾಯಕಾರಿ ತಿರುವೊಂದನ್ನು ದಾಟುವ ಪ್ರಯತ್ನದಲ್ಲಿ ಅಂದಾಜು 200 ಅಡಿ ಆಳಕ್ಕೆ ಬಿದ್ದುಬಿಟ್ಟಿತು. ಈ ದುರಂತದಲ್ಲಿ ನಾಲ್ಕು ಜನರು ಮೃತರಾಗಿ 20 ಜನ ತೀವ್ರವಾಗಿ ಗಾಯಗೊಂಡರು. ಬಲಿಯಾದ ಎಲ್ಲರೂ ತೆಲಂಗಾಣ ಮೂಲದವರು. ಇಂತಹುದ್ದೇ ಯಥಾವತ್ ಮತ್ತೊಂದು ಪ್ರಕರಣದಲ್ಲಿ, ಅದೇ ರಾಜ್ಯದ ಕರ್ನೂಲ್ ಜಿಲ್ಲೆಯಲ್ಲಿ ನಡೆದ ಮತ್ತೊಂದು ರಸ್ತೆ ಅಪಘಾತದಲ್ಲಿ 14 ಜನರು ಮೃತಪಟ್ಟರು. ಕಳೆದ ತಿಂಗಳು ಕರ್ನಾಟಕದಲ್ಲಿ ನಡೆದ ರಸ್ತೆ ಅಪಘಾತದಲ್ಲಿ 12 ಬಾಲಕಿಯರು ಸಾವನ್ನಪ್ಪಿದ್ದರು. ಗುಜರಾತ್‌ನಲ್ಲಿ ನಡೆದ ಪ್ರಕರಣದಲ್ಲಿ ರಸ್ತೆ ಬದಿಯಲ್ಲಿ ಮಲಗಿದ್ದ 15 ಕಾರ್ಮಿಕರು ವೇಗವಾಗಿ ಚಲಿಸುತ್ತಿದ್ದ ವಾಹನದ ಅಡಿಗೆ ಸಿಲುಕಿ ಮೃತಪಟ್ಟರು. ಈ ಭೀಕರ ಅಪಘಾತದಿಂದ ಉಂಟಾದ ಆಘಾತದಿಂದ ದೇಶವು ಚೇತರಿಸಿಕೊಳ್ಳುವ ಮೊದಲು, ಪಶ್ಚಿಮ ಬಂಗಾಳದ ಅಪಘಾತದಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ 14 ಜನರು ಸಾವನ್ನಪ್ಪಿದ್ದರು. ಈ ಅಪಘಾತಗಳ ಪಟ್ಟಿ ಅಂತ್ಯವಿಲ್ಲದೇ ಮುಂದುವರಿಯುತ್ತಿದೆ.
ಪ್ರತಿದಿನ ದೇಶದಲ್ಲಿ ನಡೆಯುವ ವಿವಿಧ ರಸ್ತೆ ಅಪಘಾತಗಳಲ್ಲಿ ಸರಾಸರಿ 415 ಜನರು ಸಾಯುತ್ತಿದ್ದಾರೆ. ಅದೇ ರೀತಿ ಈ ಅಪಘಾತಗಳಿಂದಾಗಿ ಪ್ರತಿವರ್ಷ ಮೂರೂವರೆ ಲಕ್ಷಕ್ಕೂ ಹೆಚ್ಚು ಜನ ದೈಹಿಕವಾಗಿ ವೈಕಲ್ಯಕ್ಕೆ ಒಳಗಾಗುತ್ತಿದ್ದಾರೆ. ವಿಶ್ವದ ಒಟ್ಟು ವಾಹನಗಳಲ್ಲಿ ಭಾರತದ ಪಾಲು ಕೇವಲ ಶೇಕಡಾ 1ರಷ್ಟಿದೆ. ಆದರೆ, 6 ಪಟ್ಟು ರಸ್ತೆ ಅಪಘಾತಗಳು ನಮ್ಮ ದೇಶದಲ್ಲಿ ನಡೆಯುತ್ತವೆ. ಒಟ್ಟಾರೆ ಜಗತ್ತಿನ ಒಟ್ಟು ರಸ್ತೆ ಅಪಘಾತಗಳಲ್ಲಿ ಸಂಭವಿಸುವ ಸಾವುಗಳಲ್ಲಿ ಶೇಕಡಾ 11ರಷ್ಟು ಸಾವುಗಳು ಭಾರತದಲ್ಲಿ ಸಂಭವಿಸುತ್ತಿವೆ.
ರಸ್ತೆ ಅಪಘಾತಗಳಿಗೆ ಸಂಬಂಧಿಸಿದಂತೆ ಭಾರತ ಮತ್ತು ಜಪಾನ್ ಒಂದೇ ನೆಲೆಗಟ್ಟಿನಲ್ಲಿ ನಿಂತಿವೆ ಎನ್ನಬಹುದು. ಆದಾಗ್ಯೂ, ಜಪಾನ್‌ನ ರಸ್ತೆ ಅಪಘಾತಗಳಲ್ಲಿ ವರ್ಷವೊಂದಕ್ಕೆ ಸಾಯುವವರ ಪ್ರಮಾಣ 5000ಕ್ಕಿಂತಲೂ ಕಡಿಮೆ. ಇದಕ್ಕೆ ವ್ಯತಿರಿಕ್ತವಾಗಿ, ಭಾರತದ ರಸ್ತೆ ಅಪಘಾತಗಳಲ್ಲಿ ಪ್ರತಿ ವರ್ಷ 1.5 ಲಕ್ಷಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತವೆ. ರಸ್ತೆ ಸುರಕ್ಷತಾ ಸಾಪ್ತಾಹಿಕಗಳ ವೀಕ್ಷಣೆ 23 ವರ್ಷಗಳ ಹಿಂದೆ ಪ್ರಾರಂಭವಾಯಿತಾದರೂ ಈ ಅವಧಿಯಲ್ಲಿ ರಸ್ತೆ ಅಪಘಾತಗಳಲ್ಲಿ ಸಂಭವಿಸಿದ ಸಾವುಗಳ ಪ್ರಮಾಣ ಐದು ಪಟ್ಟು ಹೆಚ್ಚಾಗಿದೆ. ಜನರ ಜೀವನ ಹಕ್ಕಿನ ಮೇಲೆ ಇದು ಒಂದು ದೊಡ್ಡ ಸವಾಲು ಎನಿಸಿದೆ. ರಸ್ತೆ ಅಪಘಾತಗಳು ಕೋವಿಡ್ ಸಾಂಕ್ರಾಮಿಕಗಿಂತ ಅಪಾಯಕಾರಿ ಎಂದು ಕೇಂದ್ರ ಸರ್ಕಾರ ಗುರುತಿಸಿದೆ. ಆದರೆ, ಪರಿಸ್ಥಿತಿಯನ್ನು ಸುಧಾರಿಸಲು ಅದು ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆಯೇ?