ಹೈದರಾಬಾದ್ :ರಸ್ತೆ ಸುರಕ್ಷತೆ ಇಂದಿಗೂ ಒಂದು ಪ್ರಮುಖ ಸಮಸ್ಯೆಯಾಗಿದೆ. ವಿಶ್ವಾದ್ಯಂತ ಸಾವು ಮತ್ತು ಗಾಯಗಳಿಗೆ ಕಾರಣವಾಗುತ್ತಿದೆ. ಜಾಗತಿಕವಾಗಿ 1.35 ಮಿಲಿಯನ್ ಜನರು ರಸ್ತೆ ಅಪಘಾತದಿಂದ ಸಾವನ್ನಪ್ಪುತ್ತಿದ್ರೆ, ಭಾರತವೊಂದರಲ್ಲೇ ವರ್ಷಕ್ಕೆ 1.5 ಲಕ್ಷ ಜನರು ರಸ್ತೆ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ.
ಅಂದರೆ, ಪ್ರತಿ ದಿನ 400ಕ್ಕೂ ಹೆಚ್ಚು ಜನರು ಸಾವನ್ನಪ್ಪುತ್ತಿದ್ದಾರೆ. ಪ್ರತಿ ವರ್ಷ ಜಾಗತಿಕ ರಸ್ತೆ ಅಪಘಾತ (11.35 ಮಿಲಿಯನ್) ಪ್ರಕರಣಕ್ಕೆ ಹೋಲಿಸಿದರೆ, ಭಾರತದ ರಸ್ತೆ ಅಪಘಾತದ ಪ್ರಮಾಣ ಶೇ.11ರಷ್ಟಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜುಗಳು ಹೇಳುತ್ತವೆ.
ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಿಕ (ಜನವರಿ 18-ಫೆಬ್ರವರಿ 17) ಉದ್ಘಾಟನೆ ಮಾಡಿದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಹಾಗೂ ಎಂಎಸ್‌ಎಂಇ ಸಚಿವ ಶ್ರೀ ನಿತಿನ್ ಗಡ್ಕರಿ, ಜೀವಗಳನ್ನು ರಕ್ಷಿಸುವ ಕೆಲಸವನ್ನು ತ್ವರಿತವಾಗಿ ಮಾಡುವ ಅಗತ್ಯವಿದೆ ಎಂದು ಹೇಳಿದ್ದಾರೆ. ಭಾರತದಲ್ಲಿ ರಸ್ತೆಯ ಮೇಲೆ ಪ್ರತಿನಿತ್ಯ 415 ಜನರು ಸಾವನ್ನಪ್ಪುತ್ತಿದ್ದಾರೆ.
ನಿತಿನ್ ಗಡ್ಕರಿ ಜೊತೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟನೆ ಮಾಡಿದ ರಸ್ತೆ ಸುರಕ್ಷತೆ ಮಾಸಿಕ ಕಾರ್ಯಕ್ರಮದಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ರಾಜ್ಯ ಸಚಿವ ಜ. (ನಿ) ವಿ.ಕೆ ಸಿಂಗ್ ಮತ್ತು ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಹಾಜರಿದ್ದರು. ನಾವು 2030 ರ ವರೆಗೂ ಕಾಯುತ್ತಿದ್ದರೆ, ರಸ್ತೆ ಅಪಘಾತದಿಂದಾಗಿ 6-7 ಲಕ್ಷ ಹೆಚ್ಚು ಜನರು ಸಾವನ್ನಪ್ಪುತ್ತಾರೆ. 2025 ಕ್ಕೂ ಮೊದಲು, ನಾವು ಸಾವಿನ ಪ್ರಮಾಣ ಮತ್ತು ಅಪಘಾತದ ಪ್ರಮಾಣವನ್ನು ಶೇ. 50 ರಷ್ಟು ಕಡಿಮೆ ಮಾಡಲು ಸಾಧ್ಯವಿದೆ ಎಂದು ಶ್ರೀ ಗಡ್ಕರಿ ಹೇಳಿದ್ದಾರೆ.
2019ರ ರಸ್ತೆ ಅಪಘಾತ ವರದಿ ಪ್ರಕಾರ, 2019ರಲ್ಲಿ 4,49,002 ಅಪಘಾತಗಳು ನಡೆದಿವೆ. ಇದರಿಂದಾಗಿ 1,51,113 ಜನರು ಸಾವನ್ನಪ್ಪಿದ್ದಾರೆ ಮತ್ತು 4,51,361 ಜನರು ಗಾಯಗೊಂಡಿದ್ದಾರೆ. ಒಟ್ಟು ರಸ್ತೆ ಅಪಘಾತದಲ್ಲಿ 18-60 ವರ್ಷದವರು ಶೇ. 84ರಷ್ಟಿದ್ದಾರೆ. ಪಾದಚಾರಿಗಳು, ಸೈಕಲ್ ಸವಾರರು, ದ್ವಿಚಕ್ರ ವಾಹನದಾರರೇ ಒಟ್ಟು ಅಪಘಾತ ಮತ್ತು ಮರಣದಲ್ಲಿ ಶೇ. 54ರಷ್ಟಿದ್ದಾರೆ.
ಹಲವು ವರ್ಷಗಳಿಂದ ರಸ್ತೆ ಸುರಕ್ಷತೆ ಬಗ್ಗೆ ಶ್ರಮಿಸುತ್ತಿರುವ ಮತ್ತು ರಸ್ತೆ ಸುರಕ್ಷತೆ ಜಾಲದ ಭಾಗವಾಗಿರುವ ಸಾಮಾಜಿಕ ಸಂಸ್ಥೆ ಕನ್ಸೂಮರ್ ವಾಯ್ಸ್‌ನ ಸಿಒಒ ಆಶಿಮ್ ಸನ್ಯಾಲ್ ಪ್ರಕಾರ, “ರಸ್ತೆ ಸುರಕ್ಷತೆ ಎಂಬುದು ಸರ್ಕಾರ ಮತ್ತು ನಾಗರಿಕ ಸಮಗ್ರ ಜವಾಬ್ದಾರಿಯಾಗಿದೆ. ಪ್ರತಿ ನಿಮಿಷವೂ ಸಾವು ಸಂಭವಿಸುತ್ತಿರುವುದರಿಂದ, ಸಣ್ಣದೇ ಆಗಿರಲಿ ಅಥವಾ ದೊಡ್ಡದೇ ಆಗಿರಲಿ, ಪ್ರತಿ ಕ್ರಮವೂ ಅತ್ಯಂತ ಮುಖ್ಯವಾಗಿರುತ್ತದೆ. ಪ್ರತಿಯೊಬ್ಬರ ಜೀವನವೂ ಅತ್ಯಂತ ಅಮೂಲ್ಯ” ಎಂದಿದ್ದಾರೆ.
ವಿವಿಧ ಅಪಾಯ ತಡೆ ಅಂಶಗಳು
ಹೆಲ್ಮೆಟ್ :ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ಗಳನ್ನು ಧರಿಸದೇ ಇರುವುದರಿಂದಾಗಿ 44,666 ಸಾವು ಸಂಭವಿಸಿದೆ ಮತ್ತು 2019ರಲ್ಲಿ ದೇಶದಲ್ಲಿ ಸಂಭವಿಸಿದ ಒಟ್ಟು ಅಪಘಾತ ಮರಣದಲ್ಲಿ ಇದು ಶೇ.29.82ಕ್ಕೆ ಕಾರಣವಾಗಿದೆ. ಸಚಿವಾಲಯದ ದಾಖಲೆಯ ಪ್ರಕಾರ ಒಟ್ಟು 30,148 ದ್ವಿಚಕ್ರ ವಾಹನ ಚಾಲಕರು ಸಾವನ್ನಪ್ಪಿದ್ದಾರೆ.
ಮರಣಕ್ಕೆ ಪ್ರಮುಖ ಕಾರಣವೇ ತಲೆಗೆ ಗಾಯವಾಗಿರುವುದಾಗಿದೆ. ಅಲ್ಲದೆ, ದ್ವಿಚಕ್ರ ವಾಹನ ಸವಾರರಲ್ಲಿ ಗಾಯ ಮತ್ತು ಅಂಗವೈಕಲ್ಯವು ಪ್ರಮುಖವಾಗಿದೆ. ಭಾರಿ ಸಂಖ್ಯೆಯ ಬೈಕ್ ಸವಾರರು ಹೆಲ್ಮೆಟ್ ಧರಿಸುವುದಿಲ್ಲ ಮತ್ತು ಅವನ್ನು ಧರಿಸುವವರೂ ಕಳಪೆ ಗುಣಮಟ್ಟದ ಹೆಲ್ಮೆಟ್ ಬಳಸುತ್ತಿರುತ್ತಾರೆ. ಉತ್ತಮ ಗುಣಮಟ್ಟದ ಮತ್ತು ವೆಚ್ಚದಾಯಕವಲ್ಲದ ಹೆಲ್ಮೆಟ್‌ಗಳನ್ನು ಬಳಸಿದ್ದರೆ, ಈ ಪೈಕಿ ಬಹುತೇಕ ಗಾಯಗಳನ್ನು ತಡೆಯಬಹುದಾಗಿತ್ತು ಅಥವಾ ಅವುಗಳ ತೀವ್ರತೆ ಕಡಿಮೆ ಮಾಡಬಹುದಾಗಿತ್ತು.
ಓವರ್ ಸ್ಪೀಡ್ :ನಗರಗಳಲ್ಲಿ ಓವರ್ ಸ್ಪೀಡ್ ಅತ್ಯಂತ ಗಂಭೀರ ಟ್ರಾಫಿಕ್ ನಿಯಮ ಉಲ್ಲಂಘನೆಯಾಗಿದೆ ಮತ್ತು 53,366 (64.5%) ರಸ್ತೆ ಅಪಘಾತಗಳಿಗೆ ಕಾರಣವಾಗಿದೆ. ಕೇಂದ್ರದ ವರದಿ ಪ್ರಕಾರ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸರಾಸರಿ 71.6% ಅಪಘಾತಗಳಿಗೆ ಕಾರಣವಾಗಿದೆ. ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ಚಾಲಕರು ವಾಹನ ಓಡಿಸುವುದರಿಂದ 2018ರಲ್ಲಿ 37,585 ಮತ್ತು 2019ರಲ್ಲಿ 44,358 ಅಪಘಾತಗಳಿಗೆ ಕಾರಣವಾಗಿದೆ.
ಸೀಟ್‌ಬೆಲ್ಟ್‌ಗಳು :ಸೀಟ್‌ಬೆಲ್ಟ್‌ಗಳು ಇನ್ನೊಂದು ಪ್ರಮುಖ ಸುರಕ್ಷತಾ ಸಲಕರಣೆಯಾಗಿದ್ದು, ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ಹೊರತುಪಡಿಸಿ ಇತರ ವಾಹನಗಳಲ್ಲಿ ಚಾಲಕರು ಮತ್ತು ಪ್ರಯಾಣಿಕರಿಗೆ ಕಡ್ಡಾಯವಾಗಿದೆ. ಆದರೆ, ಈಗ ಕಾರುಗಳಲ್ಲಿ ಕಡ್ಡಾಯ ಮಾಡಿರುವ ಏರ್‌ಬ್ಯಾಗ್‌ಗಳು ಸೀಟ್ ಬೆಲ್ಟ್‌ನ ಸರಿಯಾಗಿ ಧರಿಸಿಲ್ಲದೇ ಇದ್ದರೆ ಪರಿಣಾಮಕಾರಿಯಾಗಿರುವುದಿಲ್ಲ.
2019ರಲ್ಲಿ ಸೀಟ್ ಬೆಲ್ಟ್‌ಗಳನ್ನು ಧರಿಸದೇ ಇರುವುದರಿಂದ, 20,885 ಮರಣಕ್ಕೆ ಕಾರಣವಾಗಿದೆ ಮತ್ತು 2019ರಲ್ಲಿ ಒಟ್ಟು ರಸ್ತೆ ಅಪಘಾತದಲ್ಲಿನ ಮರಣಕ್ಕೆ ಶೇ.13.82 ರಷ್ಟಿದೆ ಮತ್ತು ಇದು 9,562 ಚಾಲಕರು ಮತ್ತು 11,323 ಪ್ರಯಾಣಿಕರನ್ನು ಒಳಗೊಂಡಿದೆ.
ಕುಡಿದು ವಾಹನ ಚಲಾವಣೆ :2019ರಲ್ಲಿ ತಪ್ಪು ಮಾರ್ಗದಲ್ಲಿ ವಾಹನ ಓಡಿಸಿರುವುದರಿಂದ 9200 ಜೀವ ಹಾನಿಗೆ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಒಟ್ಟು ನಾಲ್ಕು ಅಪಘಾತಗಳಲ್ಲಿ ಒಂದು ಅಪಘಾತ ಈ ರೀತಿಯದ್ದಾಗಿದೆ (2,726). ಇದರ ನಂತರದಲ್ಲಿ ಮದ್ಯ ಸೇವನೆ ಮಾಡಿ ವಾಹನ ಚಾಲನೆ ನಡೆಸುವುದೂ ಪ್ರಮುಖ ಪ್ರಕರಣಗಳಾಗಿವೆ. 2019ರಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ 2376 ಜನರು ಕುಡಿದು ವಾಹನ ಚಲಾವಣೆ ಮಾಡಿ ಸಾವನ್ನಪ್ಪಿದ್ದಾರೆ.
ಮೊಬೈಲ್ ಫೋನ್‌ಗಳ ಬಳಕೆ :ಮೊಬೈಲ್ ಫೋನ್‌ಗಳನ್ನು ಬಳಸುತ್ತಾ ವಾಹನ ಚಲಾವಣೆ ಮಾಡುವುದರಿಂದ ರಸ್ತೆಯ ಮೇಲೆ ಗಮನ ಇರುವುದಿಲ್ಲ, ಸ್ಟೀರಿಂಗ್ ವೀಲ್ ಮೇಲೆ ನಿಯಂತ್ರಣ ಇರುವುದಿಲ್ಲ ಮತ್ತು ರಸ್ತೆ ಮತ್ತು ಸುತ್ತಲಿನ ಸನ್ನಿವೇಶದ ಮೇಲೂ ಗಮನ ಇರುವುದಿಲ್ಲ. ಕುಡಿದು ವಾಹನ ಚಲಾವಣೆ ಮಾಡುವುದು ಅಥವಾ ಡ್ರಗ್ಸ್ ಸೇವನೆ, ಕೆಂಪು ದೀಪವನ್ನು ನಿರ್ಲಕ್ಷಿಸುವುದು ಮತ್ತು ಮೊಬೈಲ್ ಫೋನ್‌ಗಳ ಬಳಕೆಯೆಲ್ಲವೂ ಒಟ್ಟು ಅಪಘಾತಗಳಲ್ಲಿ ಶೇ.6ರಷ್ಟು ಇದೆ ಮತ್ತು ಒಟ್ಟು ಮರಣದಲ್ಲಿ ಶೇ.8ರಷ್ಟಾಗಿದೆ.
ರಸ್ತೆಯ ಮೇಲಿದ್ದಾಗ ಮಾಡಬೇಕಿರುವುದು ಮತ್ತು ಮಾಡಬಾರದ್ದು:
- ಪಾದಚಾರಿ ಮತ್ತು ಮಕ್ಕಳಿಗೆ ಮೊದಲು ಸ್ಥಳಾವಕಾಶ ನೀಡಿ
- ಎಲ್ಲ ಲೈಟ್‌ಗಳೂ ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂದು ಖಚಿತಪಡಿಸಿಕೊಳ್ಳಿ
- ಹೆದ್ದಾರಿಯಲ್ಲಿ ಪಾರ್ಕ್ ಮಾಡಿರುವಾಗ ವಿಪತ್ತು ಲೈಟ್‌ಗಳನ್ನು ಆನ್ ಮಾಡಿರಬೇಕು
- ವಾಹನದ ಹಿಂಭಾಗದಲ್ಲಿ ರಿಫ್ಲೆಕ್ಟರ್‌ಗಳನ್ನು ಬಳಸಬೇಕು
- ಬ್ರೇಕ್ ಮತ್ತು ಟೈರ್‌ಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಇರುವಂತಿಲ್ಲ
- ಟ್ರಾಫಿಕ್ ನಿಯಮಗಳನ್ನು ಪಾಲಿಸಿ
- ಚಾಲಕರು ಸೂಕ್ತ ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು
- ಎಂದಿಗೂ ಸೀಟ್ ಬೆಲ್ಟ್ ಧರಿಸಿ
- ಗಡಿಬಿಡಿ ಮಾಡಬೇಡಿ ಮತ್ತು ಸುರಕ್ಷಿತ ಮಾರ್ಗವನ್ನೇ ಬಳಸಿ
- ಮಂಜು ಇರುವಾಗ ಡ್ರೈವ್ ಮಾಡಬೇಡಿ, ಅಂತಹ ಸಂಕೀರ್ಣ ಹವಾಮಾನ ಸ್ಥಿತಿಯಲ್ಲಿ ಡ್ರೈವಿಂಗ್ ಮಾಡಬೇಡಿ
- ಎಚ್ಚರಿಕೆ ಚಿಹ್ನೆಗಳನ್ನು ಓದಿ. ಅವು ನಿಮಗೆ ರಸ್ತೆಯ ಸನ್ನಿವೇಶದ ಬಗೆಗೆ ಎಚ್ಚರಿಕೆ ನೀಡುತ್ತವೆ ಮತ್ತು ಅದಕ್ಕೆ ಅನುಗುಣವಾಗಿ ವಾಹನದ ವೇಗವನ್ನು ಹೊಂದಿಸಿ.