ನಾಗೌರ್(ರಾಜಸ್ಥಾನ):ಚುನಾವಣಾ ಸಭೆಯಭದ್ರತೆಗೆ ನಿಯೋಜನೆಗೊಂಡಿದ್ದ ಐವರು ಪೊಲೀಸರು ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ರಾಜಸ್ಥಾನದ ಚುರು ಪ್ರದೇಶದ ಸುಜನ್‌ಗಢ್ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರಿದ್ದ ಕಾರು ಮತ್ತು ಟ್ರಕ್ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡ ಇಬ್ಬರನ್ನು ನಾಗೌರ್ನ ಜೆಎಲ್‌ಎನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಹಿತಿಯ ಪ್ರಕಾರ, ಪೊಲೀಸರು ಇಂದು ಜುಂಜುನುವಿನಲ್ಲಿ ನಡೆಯಲಿರುವ ಬಿಜೆಪಿ ಚುನಾವಣಾ ಸಭೆಯ ಭದ್ರತೆಗಾಗಿ ನಿಯೋಜನೆಗೊಂಡಿದ್ದರು. ತಮ್ಮ ಕರ್ತವ್ಯ ನಿಮಿತ್ತ ಮುಂಜಾನೆಯೇ ಖಿಂವ್ಸರ್ನಿಂದ ಜುಂಜುನುವಿಗೆ ಹೊರಟಿದ್ದರು. ಈ ವೇಳೆ ಪೊಲೀಸರು ಸಂಚರಿಸುತ್ತಿದ್ದ ಕಾರು ಎದುರಿನಿಂದ ಬರುತ್ತಿದ್ದ ಟ್ರಕ್ಗೆ ಡಿಕ್ಕಿಯಾಗಿದೆ.
"ಅಪಘಾತದಲ್ಲಿ ಗಾಯಗೊಂಡ ಪೊಲೀಸರಿಗೆ ಚಿಕಿತ್ಸೆ ಮುಂದುವರೆದಿದೆ. ಗಾಯಗೊಂಡವರಲ್ಲಿ ಕಾನ್‌ಸ್ಟೆಬಲ್ ಮತ್ತು ಹೆಡ್ ಕಾನ್‌ಸ್ಟೆಬಲ್ ಸೇರಿದ್ದು, ಅವರಿಗೆ ನಾಗೌರ್ನ ಜೆಎಲ್‌ಎನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಪ್ರಯಾಣಿಸುತ್ತಿದ್ದ ಕಾರು ಎದುರಿನಿಂದ ಬರುತ್ತಿದ್ದ ಟ್ರಕ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಾಗೌರ್ ಜೆಎಲ್‌ಎನ್ ಆಸ್ಪತ್ರೆ ಹೊರಠಾಣೆ ಕಾನ್‌ಸ್ಟೇಬಲ್ ರಾಮ್‌ಕುಮಾರ್ ಮಾತನಾಡಿ, "ಜುಂಜುನುವಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ಸಭೆಯಲ್ಲಿನ ಭದ್ರತೆಗೆಂದು ಏಳು ಜನ ಪೊಲೀಸರು ತೆರಳುತ್ತಿದ್ದಾಗ ಅವರಿದ್ದ ಕಾರು ಟ್ರಕ್ಗೆ ಗುದ್ದಿತು. ಚುರುವಿನ ಸುಜನ್‌ಗಢ್ ಸದರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸಿದೆ. ಮೃತರನ್ನು ರಾಜಸ್ಥಾನದ ನಾಗೌರ್ ಜಿಲ್ಲೆಯ ಖಿನ್ವಸರ್ ಪೊಲೀಸ್ ಠಾಣೆಯ ರಾಮಚಂದ್ರ, ಕುಂಭರಾಮ್, ತನರಾಮ್, ಲಕ್ಷ್ಮಣ್ ಸಿಂಗ್ ಮತ್ತು ಸುರೇಶ್ ಎಂದು ಗುರುತಿಸಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.