ಕರ್ನಾಟಕ

karnataka

ಭೀಕರ ರಸ್ತೆ ಅಪಘಾತ: ಸ್ಥಳದಲ್ಲೇ 6 ಮಂದಿ ಪ್ರಯಾಣಿಕರ ಸಾವು, 8 ಜನರ ಸ್ಥಿತಿ ಗಂಭೀರ

By

Published : Apr 15, 2023, 12:46 PM IST

ಶ್ರಾವಸ್ತಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆರು ಮಂದಿ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

accident
ರಸ್ತೆ ಅಪಘಾತ

ಶ್ರಾವಸ್ತಿ( ಉತ್ತರ ಪ್ರದೇಶ) :ಶ್ರಾವಸ್ತಿ ಜಿಲ್ಲೆಯ ಐಕೌನಾ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 730 ರಲ್ಲಿ ಇಂದು ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸೀತಾದ್ವಾರದ ಬಳಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಸಾವನ್ನಪ್ಪಿದ್ದಾರೆ. ಜೊತೆಗೆ, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರನ್ನು ಶೈಲೇಂದ್ರ ಕುಮಾರ್ (30), ಮುಖೇಶ್ ಕುಮಾರ್ (28), ರಮಾ ದೇವಿ (42), ಹರೀಶ್ ಕುಮಾರ್ (42), ಅಮಿತ್ ಗುಪ್ತಾ ಅಲಿಯಾಸ್ ವೀರು (8), ಪುಟ್ಟಿಲಾಲ್ ಅಲಿಯಾಸ್ ಅರ್ಜುನ್ (25) ಎಂದು ಗುರುತಿಸಲಾಗಿದೆ. ಬಬ್ಲು (34), ಸುಂದರ (30), ಸುರೇಶ್ ಕುಮಾರ್ (42), ನೀತು (28), ರೋಹಿತ್ (8), ನಾಂಕೆ (35), ನೀಲಂ ಮತ್ತು ಲಾಡೋ ಸೇರಿದಂತೆ ಎಂಟು ಜನರು ಗಾಯಗೊಂಡಿದ್ದಾರೆ. ಲುಧಿಯಾನದಿಂದ ಇಕೌನಾ ಪ್ರದೇಶದ ಮಾರ್ಗವಾಗಿ ಬರುತ್ತಿದ್ದಾಗ ದುರಂತ ಸಂಭವಿಸಿದೆ. ಗಾಯಾಳುಗಳನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇವರಲ್ಲಿ ಐವರ ಸ್ಥಿತಿ ಚಿಂತಾಜನಕವಾಗಿರುವ ಕಾರಣ ಬಹ್ರೈಚ್ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

"ವಾಹನದಲ್ಲಿ ಒಟ್ಟು 14 ಮಂದಿ ಇದ್ದರು. ಕಾರು ಮರಕ್ಕೆ ಡಿಕ್ಕಿ ಹೊಡೆದ ನಂತರ ಪಕ್ಕದಲ್ಲಿದ್ದ ಹೊಂಡಕ್ಕೆ ಬಿದ್ದಿದೆ. ಬಳಿಕ ಅದನ್ನು ಜೆಸಿಬಿಯಿಂದ ಹೊಗೆ ತೆಗೆಯಲಾಯಿತು. ರಸ್ತೆ ಅಪಘಾತದಲ್ಲಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದ ಗಾಯಾಳುಗಳನ್ನು ಪೊಲೀಸರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮೊದಲಿಗೆ ಗಾಯಾಳುಗಳನ್ನು ಐಕೌನಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ನಂತರ, ಐವರ ಸ್ಥಿತಿ ಗಂಭೀರವಾದ ಕಾರಣ ಬಹ್ರೈಚ್ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ. ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ" ಎಂದು ಶ್ರಾವಸ್ತಿ ಎಸ್​ಪಿ ಪ್ರಾಚಿ ಸಿಂಗ್ ತಿಳಿಸಿದ್ದಾರೆ.

ಸಂತಾಪ ಸೂಚಿಸಿದ ಸಿಎಂ : ಶ್ರಾವಸ್ತಿ ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಅರು ಮಂದಿ ಪ್ರಾಣ ಕಳೆದುಕೊಂಡಿರುವ ವಿಷಯ ತಿಳಿದು ತೀವ್ರ ದುಃಖವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಿಎಂ ಯೋಗಿ ಆದಿತ್ಯನಾಥ್​ ಸಂತಾಪ ಸೂಚಿಸಿದ್ದಾರೆ. ಜೊತೆಗೆ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಅಲ್ಲದೆ, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ಇದನ್ನೂ ಓದಿ :ಚುನಾವಣಾ ಪ್ರಚಾರ ಮುಗಿಸಿ ಬರುತ್ತಿದ್ದ ವೇಳೆ ಕಾರು ಅಪಘಾತ.. ಐಸಿಯುವಿನಲ್ಲಿ ಚಿಂಚನಸೂರ್​ಗೆ ಚಿಕಿತ್ಸೆ

ಚಿಂಚನಸೂರ್ ಕಾರು ಅಪಘಾತ:ಇನ್ನು ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಅವರ ಕಾರು ಸಹ ನಿನ್ನೆ ರಾತ್ರಿ ಕಲಬುರಗಿ ನಗರದ ಆಕಾಶವಾಣಿ ಕೇಂದ್ರದ ಬಳಿ ಅಪಘಾತಕ್ಕೀಡಾಗಿದೆ. ಚಿಂಚನಸೂರ ಅವರ ಮುಖ ಮತ್ತು ಕಾಲುಗಳಿಗೆ ಗಾಯಗಳಾಗಿದ್ದು, ಸ್ಥಳೀಯರು ನಗರದ ಯುನೈಟೆಡ್​​ ಆಸ್ಪತ್ರೆಗೆ ದಾಖಲಿಸಿದ್ದಾರೆ. ಜೊತೆಗೆ, ಕಾಂಗ್ರೆಸ್​ ಅಭ್ಯರ್ಥಿ ಜೊತೆಯಲ್ಲಿದ್ದ ಗನ್​ಮ್ಯಾನ್ ಮತ್ತು ಚಾಲಕರಿಬ್ಬರಿಗೂ ಸಹ ಸಣ್ಣಪುಟ್ಟ ಗಾಯಗಳಾಗಿವೆ. ಚಾಲಕ ನಿದ್ದೆಯ ಮಂಪರಿನಲ್ಲಿದ್ದ ಕಾರಣ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ABOUT THE AUTHOR

...view details