ಮೊರಾದಾಬಾದ್(ಯುಪಿ):ಜಿಲ್ಲೆಯ ಪಾಕ್ಬಡಾ ಪ್ರದೇಶದ ರಾಷ್ಟ್ರೀಯ ಹೆದ್ದಾರಿ -9 ರಲ್ಲಿ ಡಬಲ್ ಡೆಕ್ಕರ್ ಬಸ್‌ವೊಂದು ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ, ಐವರು ಸ್ಥಳದಲ್ಲೇ ಸಾವನ್ನಪ್ಪಿ, ಸುಮಾರು 24 ಪ್ರಯಾಣಿಕರು ಗಾಯಗೊಂಡಿದ್ದಾರೆ.
ಪಿಕಪ್ ವಾಹನಕ್ಕೆ ಡಬಲ್ ಡೆಕ್ಕರ್ ಬಸ್ ಡಿಕ್ಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಿಗ್ಗೆ 5 ಗಂಟೆಗೆ ಪಿಕಪ್ ವಾಹನ ವೇಗವಾಗಿ ಹೋಗುತ್ತಿತ್ತು. ಈ ವಾಹನವನ್ನು ಟ್ರಾಫಿಕ್ ಪೊಲೀಸರು ನಿಲ್ಲಿಸಲು ಸೂಚಿಸಿದ್ದಾರೆ. ಈ ವೇಳೆ ವಾಹನವನ್ನು ನಿಧಾನಗೊಳಿಸುತ್ತಿದ್ದಂತೆ ಹಿಂಬದಿಯಿಂದ ಬಂದ ಡಬಲ್ ಡೆಕ್ಕರ್ ಬಸ್ ರಭಸವಾಗಿ ಗುದ್ದಿದೆ. ಡಿಕ್ಕಿ ಸಂಭವಿಸಿದ ಕೂಡಲೇ ಎರಡೂ ವಾಹನಗಳು ರಸ್ತೆಯಲ್ಲಿ ಪಲ್ಟಿಯಾಗಿವೆ. ಬಸ್ ಪಲ್ಟಿಯಾಗುತ್ತಿದ್ದಂತೆ ಪ್ರಯಾಣಿಕರು ಬಸ್ನಲ್ಲಿ ಕೂಗಾಡಿಕೊಂಡಿದ್ದಾರೆ.
ಕೂಡಲೇ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯ ಕೈಗೊಂಡರು. ಅಪಘಾತದ ಮಾಹಿತಿಯ ಮೇರೆಗೆ ಪೊಲೀಸರು ಮತ್ತು ಆಂಬ್ಯುಲೆನ್ಸ್ ಕೂಡ ಸ್ಥಳಕ್ಕೆ ತಲುಪಿತು. ದುರ್ಘಟನೆಯಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟರೆ 24 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಎಲ್ಲರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
"ಪಂಜಾಬ್‌ನಲ್ಲಿ ಕೆಲಸ ಮಾಡಿದ ನಂತರ ತಮ್ಮ ಗ್ರಾಮವಾದ ಸಿರ್ಸಾ ಜಿಲ್ಲೆಯ ಪಿಲಿಭಿಟ್‌ಗೆ ಹಿಂದಿರುಗುತ್ತಿದ್ದೆವು. ನಮ್ಮ ವಾಹನವನ್ನು ನಿಲ್ಲಿಸಲು ಪೊಲೀಸರು ಸೂಚಿಸಿದರು. ಆದರೆ ಪಿಕಪ್‌ನ ವೇಗ ಕಡಿಮೆಯಾದ ತಕ್ಷಣ ಹಿಂದಿನಿಂದ ಬರುತ್ತಿದ್ದ ಬಸ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತು" ಎಂದು ಪಿಕಪ್ ವಾಹನದಲ್ಲಿ ಗಾಯಗೊಂಡ ಪ್ರತ್ಯಕ್ಷದರ್ಶಿ ಬಲರಾಮ್ ಮಾಹಿತಿ ನೀಡಿದರು.
ಮೊರಾದಾಬಾದ್‌ನಲ್ಲಿ ನಡೆದ ರಸ್ತೆ ಅಪಘಾತದ ಬಗ್ಗೆ ಸಿಎಂ ಯೋಗಿ ದುಃಖ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವಂತೆಯೂ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.