ರಾಂಚಿ (ಜಾರ್ಖಂಡ್):ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ಲಾಲು ಪ್ರಸಾದ್ ಯಾದವ್ ಅವರನ್ನು ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯ ಮಂಗಳವಾರ ಡೊರಾಂಡಾ ಖಜಾನೆ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಿ ಎಂದು ತೀರ್ಪು ನೀಡಿದೆ.
ಮೇವು ಹಗರಣದ ಪ್ರಕರಣದ 5ನೇ ಕೇಸ್ ಇದಾಗಿದೆ. ಕಳೆದ ವರ್ಷದ ಏಪ್ರಿಲ್‌ನಲ್ಲಿ ಈ ಹಗರಣಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಒಂದಾದ ದುಮ್ಕಾ ಖಜಾನೆ ಪ್ರಕರಣದಲ್ಲಿ ಜಾರ್ಖಂಡ್ ಹೈಕೋರ್ಟ್ ಲಾಲೂಗೆ ಜಾಮೀನು ನೀಡಿತ್ತು.
ಅಕ್ಟೋಬರ್ 2020ರಲ್ಲಿ ಚೈಬಾಸಾ ಖಜಾನೆ ಹಗರಣ ಪ್ರಕರಣದಲ್ಲಿ ಮತ್ತು ಫೆಬ್ರವರಿ 2020ರಲ್ಲಿ ದಿಯೋಘರ್ ಖಜಾನೆ ಹಗರಣ ಪ್ರಕರಣದಲ್ಲಿ ಇವರು ಜಾಮೀನು ಪಡೆದಿದ್ದರು. ಈಗ ಐದನೇ ಪ್ರಕರಣದಲ್ಲಿ ದೋಷಿಯೆಂದು ತೀರ್ಪು ನೀಡಲಾಗಿದ್ದು, ಫೆಬ್ರವರಿ 21ಕ್ಕೆ ಶಿಕ್ಷೆ ಪ್ರಕಟವಾಗಲಿದೆ.
ಲಾಲು ವಿರುದ್ಧ ದಾಖಲಾದ ಮೇವು ಪ್ರಕರಣಗಳ ವಿವರ:ಜಾರ್ಖಂಡ್ನ ಐದು ಮೇವು ಹಗರಣ ಪ್ರಕರಣಗಳಲ್ಲಿ ಮತ್ತು ಬಿಹಾರ್ನ ಒಂದು ಮೇವು ಹಗರಣ ಪ್ರಕರಣದಲ್ಲಿ ಸುಮಾರು ಕೋಟ್ಯಂತರ ರೂಪಾಯಿಯನ್ನು ಖಜಾನೆಗಳಿಂದ ಅಕ್ರಮವಾಗಿ ತೆಗೆದುಕೊಳ್ಳಲಾಗಿದೆ ಎಂಬ ಗಂಭೀರ ಆರೋಪ ಲಾಲು ಯಾದವ್ ಮೇಲಿದೆ.
ಸುಮಾರು ಐದು ಮೇವು ಹಗರಣ ಪ್ರಕರಣಗಳಲ್ಲಿ ಲಾಲು ಪ್ರಸಾದ್ ಯಾದವ್ ಅವರ ವಿರುದ್ಧ ದೂರು ದಾಖಲಾಗಿದ್ದು, ಮೇವಿಗಾಗಿ ವಿವಿಧ ಜಿಲ್ಲೆಗಳಲ್ಲಿ ಖಜಾನೆಗಳಲ್ಲಿ ಪಶುಸಂಗೋಪನಾ ಇಲಾಖೆ ಮೀಸಲಿಟ್ಟಿದ್ದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡ ಆರೋಪ ಸಾಬೀತಾಗಿದೆ.
- ದುಮ್ಕಾ ಖಜಾನೆ ಕೇಸ್-3.97 ಕೋಟಿ ರೂಪಾಯಿ
- ಚೈಸಾಬಾ ಖಜಾನೆ ಕೇಸ್- 26 ಕೋಟಿ ರೂಪಾಯಿ
- ಭಾಗಲ್ಪುರ ಖಜಾನೆ ಖೇಸ್-45 ಲಕ್ಷ ರೂಪಾಯಿ
- ದಿಯೋಘರ್ ಖಜಾನೆ ಕೇಸ್- 89.27 ಕೋಟಿ ರೂಪಾಯಿ
- ಡೊರಾಂಡಾ ಖಜಾನೆ ಕೇಸ್- 184 ಕೋಟಿ ರೂಪಾಯಿ