ಕರ್ನಾಟಕ

karnataka

ETV Bharat / bharat

ಕೋವಿಡ್​-19 ನೆಪದಲ್ಲಿ ತಾಯಿ-ಶಿಶು ಬೇರ್ಪಡೆ ಮಗುವಿನ ಆರೋಗ್ಯಕ್ಕೆ ಅಪಾಯಕಾರಿ ; WHO - ಕಾಂಗರೂ ಮಾದರಿ ಪಾಲನೆ

ಕೋವಿಡ್​-19 ಸೋಂಕು ತಗುಲಿದ ನವಜಾತ ಶಿಶುಗಳಲ್ಲಿ ರೋಗದ ತೀವ್ರತೆ ಅತಿ ಕಡಿಮೆಯಾಗಿರುತ್ತದೆ ಹಾಗೂ ರೋಗಲಕ್ಷಣಗಳು ಸಹ ವಿರಳವಾಗಿವೆ. ಸೋಂಕಿನಿಂದ ಶಿಶುಗಳು ಸಾಯುಯ ಸಾಧ್ಯತೆ ತೀರಾ ಕಡಿಮೆ ಎಂದು ಸಂಶೋಧನೆಗಳು ತಿಳಿಸಿವೆ..

risks of separating newborns from mothers during COVID-19 pandemic
ತಾಯಿ-ಶಿಶು ಬೇರ್ಪಡೆ ಮಗುವಿನ ಆರೋಗ್ಯಕ್ಕೆ ಅಪಾಯಕಾರಿ

By

Published : Mar 17, 2021, 4:21 PM IST

ಹೈದರಾಬಾದ್ :ನವಜಾತ ಶಿಶುಗಳನ್ನು ಸದಾ ತಂದೆ-ತಾಯಿಗಳ ಸಾಮೀಪ್ಯದಲ್ಲಿರುವಂತೆ ನೋಡಿಕೊಳ್ಳುವುದು ಶಿಶುಗಳ ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯ ಎಂದು ಸಂಶೋಧನಾ ಅಧ್ಯಯನವೊಂದು ತಿಳಿಸಿದೆ.

ಅದರಲ್ಲೂ ಕಡಿಮೆ ತೂಕದ ಹಾಗೂ ಅವಧಿ ಪೂರ್ವ ಜನಿಸಿದ ಮಕ್ಕಳಿಗೆ ಜೈವಿಕ ಪಾಲಕರ ಸಾಮೀಪ್ಯ ಅತೀ ಅಗತ್ಯ ಎಂದು ತಿಳಿಸಲಾಗಿದೆ. ಲಾನ್ಸೆಟ್ ಇ ಕ್ಲಿನಿಕಲ್ ಮೆಡಿಸಿನ್ (Lancet EclinicalMedicine)ವೈಜ್ಞಾನಿಕ ಜರ್ನಲ್​ನಲ್ಲಿ ಈ ಕುರಿತಾದ ಸಂಶೋಧನಾ ವರದಿ ಪ್ರಕಟವಾಗಿದೆ.

ಇತ್ತೀಚೆಗೆ ಕೋವಿಡ್​-19 ಬಿಕ್ಕಟ್ಟು ಉಲ್ಬಣವಾದ ನಂತರ ತಾಯಿ ಹಾಗೂ ಮಗುವನ್ನು ದೂರವಿಡುವ ಸಂದರ್ಭಗಳು ಆಗಾಗ್ಗೆ ನಡೆಯುತ್ತಿವೆ. ಆದರೆ, ಹೀಗೆ ಮಾಡುವುದರಿಂದ ನವಜಾತ ಶಿಶುಗಳು ಸಾವಿಗೀಡಾಗುವ ಹಾಗೂ ಆ ಮಕ್ಕಳು ಜೀವನಪರ್ಯಂತ ದೀರ್ಘಕಾಲೀನ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ವರದಿ ಉಲ್ಲೇಖಿಸಿದೆ.

ಅತಿ ಹೆಚ್ಚು ಅವಧಿಪೂರ್ವ ಹೆರಿಗೆ ಹಾಗೂ ಶಿಶು ಮರಣ ಸಂಭವಿಸುವ ಅತಿ ಬಡತನದ ದೇಶಗಳಲ್ಲಿ ನವಜಾತ ಶಿಶು ಹಾಗೂ ತಾಯಿ ಬೇರ್ಪಡುವ ಸಮಸ್ಯೆಗಳು ಹೆಚ್ಚಿವೆ. ಕಾಂಗರೂಗಳು ಹೇಗೆ ಮರಿಯನ್ನು ತಮ್ಮ ಹೊಟ್ಟೆ ಕೆಳಗಿನ ಚೀಲದಲ್ಲಿಟ್ಟು ಸಾಕುತ್ತವೆಯೋ ಅದೇ ರೀತಿ ಮಾನವರಲ್ಲಿಯೂ ತಾಯಿ ಹಾಗೂ ಶಿಶುವಿನ ಸಾಮೀಪ್ಯ ಅಗತ್ಯ ಎಂದು ಸಂಶೋಧನೆ ಹೇಳಿದೆ.

ಶಿಶು ಬೆಳೆದು ದೊಡ್ಡದಾಗುವವರೆಗೂ ಕಾಂಗರೂ ರಕ್ಷಣೆಯ ಮಾದರಿ ತಾಯಿಯ ಸಾಮೀಪ್ಯದ ಲಾಲನೆ ಪಾಲನೆಯಿಂದ 1 ಲಕ್ಷ 25 ಸಾವಿರ ಶಿಶುಗಳ ಜೀವ ಉಳಿಸಲು ಸಾಧ್ಯ. ಅವಧಿ ಪೂರ್ವ ಜನಿಸಿದ ಹಾಗೂ ಕಡಿಮೆ ತೂಕ ಹೊಂದಿದ ಮಕ್ಕಳಿಗೆ ತಾಯಿಯ ಸ್ಪರ್ಶದ ಜೊತೆಯಲ್ಲಿರುವುದು ಹಾಗೂ ತಾಯಿಯು ಮೊಲೆ ಉಣಿಸುವುದು ಅತಿ ಮುಖ್ಯ ಎಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ.

ಅವಧಿಪೂರ್ವ ಜನಿಸಿದ ಹಾಗೂ ಕಡಿಮೆ ತೂಕ ಹೊಂದಿರುವ ಶಿಶುಗಳು ತಾಯಿಯ ಸ್ಪರ್ಶದೊಂದಿಗೆ ಬೆಳೆಯುತ್ತಿದ್ದರೆ, ಶಿಶು ಮರಣ ಪ್ರಮಾಣವನ್ನು ಶೇ.40ರಷ್ಟು, ಹೈಪೊಥರ್ಮಿಯಾ ಸಮಸ್ಯೆಯನ್ನು (ಹಠಾತ್ತಾಗಿ ದೇಹದ ಉಷ್ಣಾಂಶ ಕಡಿಮೆಯಾಗುವುದು) ಹಾಗೂ ಇತರ ಸೋಂಕು ತಗಲುವಿಕೆಯನ್ನು ಶೇ.65ರಷ್ಟು ಕಡಿಮೆ ಮಾಡಬಹುದು.

"ತಾಯಿಯ ಸ್ಪರ್ಶದೊಂದಿಗೆ ಇರುವುದು ಪ್ರತಿ ನವಜಾತ ಶಿಶುವಿನ ಮೂಲಭೂತ ಹಕ್ಕಾಗಿದೆ. ಕೋವಿಡ್​-19 ಸೋಂಕಿನ ನೆಪದಲ್ಲಿ ಮಗುವನ್ನು ತಾಯಿಯಿಂದ ದೂರವಿಡುವುದರಿಂದ ಶಿಶುಗಳ ಆರೋಗ್ಯಕರ ಬೆಳವಣಿಗೆಗೆ ಭಾರಿ ಅಡ್ಡಿ ಎದುರಾಗುತ್ತಿದೆ" ಎನ್ನುತ್ತಾರೆ ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕಿ ಡಾ. ಅನ್ಶು ಬ್ಯಾನರ್ಜಿ.

ಹೆರಿಗೆ ನಂತರದ ಆರೈಕೆಯಲ್ಲಿ ತೊಡಗಿಸಿಕೊಂಡಿರುವ ಸಾವಿರಾರು ಆರೋಗ್ಯ ಕಾರ್ಯಕರ್ತೆಯರನ್ನು ಸಂದರ್ಶಿಸಿ ನಡೆಸಲಾದ ಜಾಗತಿಕ ಸಮೀಕ್ಷೆಯೊಂದರ ವರದಿಯು ಬ್ರಿಟಿಷ್ ಮೆಡಿಕಲ್ ಜರ್ನಲ್​ನಲ್ಲಿ ಕಳೆದೆರಡು ದಿನಗಳ ಹಿಂದೆ ಪ್ರಕಟವಾಗಿದೆ.

ಕೋವಿಡ್​-19 ಸೋಂಕು ತಗುಲಿರುವ ಅಥವಾ ಶಂಕಿತ ಪ್ರಕರಣಗಳಲ್ಲಿ ತಾವು ತಾಯಿ ಹಾಗೂ ಮಗುವನ್ನು ದೂರದಲ್ಲಿ ಇಡುತ್ತೇವೆ ಎಂದು ಸುಮಾರು 62 ದೇಶಗಳ ಆರೋಗ್ಯ ಕಾರ್ಯಕರ್ತೆಯರು ಹೇಳಿದ್ದಾರೆ. ಅಂದರೆ ಶಂಕಿತ ಕೊರೊನಾ ಪ್ರಕರಣಗಳಲ್ಲಿ ಶೇ.25ರಷ್ಟು ಮಕ್ಕಳಿಗೆ ತಾಯಿಯ ಎದೆಹಾಲು ಸಿಗುತ್ತಿಲ್ಲ ಎಂಬುದು ಈ ಸಮೀಕ್ಷೆಯಿಂದ ತಿಳಿಯುತ್ತದೆ.

ಕೋವಿಡ್​-19 ಸೋಂಕು ತಗುಲಿದ ನವಜಾತ ಶಿಶುಗಳಲ್ಲಿ ರೋಗದ ತೀವ್ರತೆ ಅತಿ ಕಡಿಮೆಯಾಗಿರುತ್ತದೆ ಹಾಗೂ ರೋಗಲಕ್ಷಣಗಳು ಸಹ ವಿರಳವಾಗಿವೆ. ಸೋಂಕಿನಿಂದ ಶಿಶುಗಳು ಸಾಯುಯ ಸಾಧ್ಯತೆ ತೀರಾ ಕಡಿಮೆ ಎಂದು ಸಂಶೋಧನೆಗಳು ತಿಳಿಸಿವೆ.

ತಾಯಿ ಅಥವಾ ಮಗುವಿಗೆ ಸೋಂಕು ತಗುಲಿದಾಗ ಅಥವಾ ಸೋಂಕಿನ ಶಂಕೆ ಇದ್ದರೂ ಸಹ ತಾಯಿ-ಮಗುವನ್ನು ಪ್ರತ್ಯೇಕ ಕೋಣೆಯಲ್ಲಿರಿಸಿ ಮಗುವಿಗೆ ತಾಯಿಯ ಸ್ಪರ್ಶ ಯಾವಾಗಲೂ ಸಿಗುವಂತೆ ನೋಡಿಕೊಳ್ಳಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದೆ.

ABOUT THE AUTHOR

...view details