ನವದೆಹಲಿ: ಪೆಟ್ರೋಲ್-ಡೀಸೆಲ್ ಬೆಲೆಗಳು ಮುಗಿಲು ಮುಟ್ಟುತ್ತಿವೆ. ಇಂಧನ ಬೆಲೆಯಲ್ಲಿ ವಿಪರೀತ ಏರಿಕೆಯಾಗುತ್ತಿರುವ ಕಾರಣ ಗ್ರಾಹಕರು ಈಗ ಸಿಎನ್‌ಜಿ (CNG) ವಾಹನಗಳತ್ತ ಚಿತ್ತ ಹೊರಳಿಸಿದ್ದಾರೆ.
ಇಂಧನ ಬೆಲೆ ಹೆಚ್ಚಳ: CNG ವಾಹನಗಳತ್ತ ಮುಖ ಮಾಡಿದ ಗ್ರಾಹಕರು - ನೈಸರ್ಗಿಕ ಅನಿಲ ವಾಹನ
ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಿದ್ದರಿಂದ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್‌ಜಿ) ಚಾಲಿತ ವಾಹನಗಳ ಬಳಕೆ ಹೆಚ್ಚಾಗುತ್ತಿದೆ.
ತೈಲ ಬೆಲೆ ಗಗನಮುಖಿಯಾಗುತ್ತಿದ್ದು ಸಿಎನ್‌ಜಿಯ (Compressed natural gas) ಕ್ರೇಜ್ ಗ್ರಾಹಕರಲ್ಲಿ ಹೆಚ್ಚುತ್ತಿದೆ. ಹಾಗಾಗಿ ಸಿಎನ್‌ಜಿ ವಾಹನಗಳಿಗೆ ಬೇಡಿಕೆಯೂ ಜಾಸ್ತಿಯಾಗುತ್ತಿದೆ. ಪ್ರಮುಖವಾಗಿ ನಗರಗಳಿಗೆ ಈ ವಾಹನಗಳು ಲಗ್ಗೆಇಡುತ್ತಿವೆ ಎಂದು ಮೋತಿಲಾಲ್ ಓಸ್ವಾಲ್ ಹಣಕಾಸು ಸೇವೆಗಳು (MOFSL) ತಿಳಿಸಿದೆ.
MOFSL ಪ್ರಕಾರ, ಜೂನ್ 2021 ರ ಮಧ್ಯಭಾಗದಿಂದ ಆಂದ್ರೆ ಎರಡನೇ ಕೋವಿಡ್ ಅನ್ಲಾಕ್ ಬಳಿಕ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಬೆಳವಣಿಗೆ ಕಾಣುತ್ತಿದೆ. ದ್ವಿಚಕ್ರ ವಾಹನಗಳಿಗೂ ಸಹ ಬೇಡಿಕೆ ಇದ್ದು, ನಿಧಾನವಾಗಿ ಉದ್ಯಮ ಚೇತರಿಸಿಕೊಳ್ಳುತ್ತಿದೆ. ತೈಲದರ ಏರಿಕೆಯೇ ಸಂಕುಚಿತ ನೈಸರ್ಗಿಕ ಅನಿಲ ವಾಹನಗಳಿಗೆ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.