ಕರ್ನಾಟಕ

karnataka

ETV Bharat / bharat

ಬ್ರಿಟನ್‌ನಲ್ಲಿ ದೀಪಾವಳಿ ಧಮಾಕ: 'ಸೂರ್ಯ ಮುಳುಗದ ದೇಶ'ಕ್ಕೆ ಭಾರತ ಮೂಲದ ರಿಷಿ ಸುನಾಕ್‌ ಪ್ರಧಾನಿ

ಕೊನೆಗೂ ನಿರೀಕ್ಷೆ ಹುಸಿಯಾಗಲಿಲ್ಲ. ಬ್ರಿಟನ್‌ಗೆ ರಿಷಿ ಸುನಾಕ್‌ 57ನೇ ಪ್ರಧಾನ ಮಂತ್ರಿಯಾಗಿ ನೇಮಕವಾಗಿದ್ದಾರೆ. ಭಾರತೀಯ ಮೂಲದ ಈ ಯುವಕನ ಬದುಕಿನ ಸಂಕ್ಷಿಪ್ತ ಪ್ರಯಾಣ ಇಲ್ಲಿದೆ.

ಬ್ರಿಟನ್​ನಲ್ಲಿ ದೀಪಾವಳಿ: ಭಾರತದ ಅಳಿಯ ರಿಷಿ ಸುನಕ್​ಗೆ ಒಲಿದು ಬಂತು ಪ್ರಧಾನಿ ಪಟ್ಟ
Britain gets its youngest Prime Minister in last 200 years

By

Published : Oct 24, 2022, 5:12 PM IST

Updated : Oct 24, 2022, 7:00 PM IST

ಬ್ರಿಟನ್‌ನ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷ ರಿಷಿ ಸುನಕ್(42) ಅವರನ್ನು ಬ್ರಿಟನ್​ನ ಮುಂದಿನ ಪ್ರಧಾನಿ ಎಂದು ಘೋಷಿಸಿದೆ. ಇದು ಸುನಕ್ ಅವರಿಗೆ ಜೀವನದ ಮರೆಯಲಾಗದ ದೀಪಾವಳಿ ಗಿಫ್ಟ್ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

ಸೋಲು ಕಂಡ 9 ವಾರಗಳಲ್ಲೇ ಪ್ರಧಾನಿ ಪಟ್ಟ: ಈಗ ಪ್ರಧಾನಿ ಸ್ಥಾನದಿಂದ ನಿರ್ಗಮಿಸಿರುವ ಲಿಜ್ ಟ್ರಸ್ ಎದುರು 20 ಸಾವಿರ ಮತಗಳ ಅಂತರದಿಂದ ಸೋತ ಕೇವಲ 9 ವಾರಗಳಲ್ಲೇ ರಿಷಿ ಸುನಕ್​ಗೆ ಅದೇ ಪ್ರಧಾನಿ ಹುದ್ದೆ ಮತ್ತೆ ಒಲಿದು ಬಂದಿದೆ. ಇದನ್ನು ಸುನಕ್ ಅಷ್ಟೇ ಅಲ್ಲ, ಅವರ ಯಾವ ಅಭಿಮಾನಿಗಳೂ ಬಹುಶ: ನಿರೀಕ್ಷೆ ಮಾಡಿರಲಿಲ್ಲ. ಇನ್ಫೊಸಿಸ್ ಸಹ-ಸಂಸ್ಥಾಪಕ ಮತ್ತು ಭಾರತೀಯ ಬಿಲಿಯನೇರ್ ಎನ್​.ಆರ್. ನಾರಾಯಣ ಮೂರ್ತಿ ಅವರ ಅಳಿಯ ಈಗ ಬ್ರಿಟನ್ ಪ್ರಧಾನಿಯಾಗಿ ಇತಿಹಾಸ ಸೃಷ್ಟಿಸಿದ್ದಾರೆ.

ಬ್ರಿಟನ್​ಗೆ ವಲಸೆ ಹೋಗಿದ್ದರು ರಿಷಿ ತಾತ.. ರಿಷಿ ಸುನಕ್ ಎಂಬ ಸ್ವಯಂ ನಿರ್ಮಿತ ವ್ಯಕ್ತಿ ತನ್ನ ಸಂಪೂರ್ಣ ಧೈರ್ಯ ಮತ್ತು ಪರಿಶ್ರಮದ ಮೂಲಕವೇ ಇಂದು ಬ್ರಿಟನ್‌ನ ಅತ್ಯಂತ ಉನ್ನತ ಸ್ಥಾನಕ್ಕೇರುತ್ತಿದ್ದಾರೆ. ಮೂಲತಃ ಪಂಜಾಬ್‌ನ, ಆದರೆ ಯುಕೆಯ ಸೌತ್‌ಹ್ಯಾಂಪ್ಟನ್ ಪ್ರದೇಶದಲ್ಲಿ ಭಾರತೀಯ ಕುಟುಂಬದಲ್ಲಿ ಜನಿಸಿದ ರಿಷಿ ಅವರ ತಾಯಿ ಫಾರ್ಮಸಿಸ್ಟ್ ಆಗಿದ್ದು, ತಂದೆ ರಾಷ್ಟ್ರೀಯ ಆರೋಗ್ಯ ಸೇವೆ (ಎನ್‌ಎಚ್‌ಎಸ್)ಯಲ್ಲಿ ವೈದ್ಯರಾಗಿದ್ದಾರೆ. ಸುನಕ್ ತಮಗೆ ಬೇಕಾದ ಅತ್ಯುತ್ತಮ ಶಿಕ್ಷಣ ಪಡೆಯಲು ಕಷ್ಟ ಪಟ್ಟಿದ್ದು ನಿಜ. ಅವರ ಅಜ್ಜ ಪಂಜಾಬ್‌ನವರಾಗಿದ್ದು, ಆರಂಭದಲ್ಲಿ ಪೂರ್ವ ಆಫ್ರಿಕಾಕ್ಕೆ ಮತ್ತು ಅಲ್ಲಿಂದ ಬ್ರಿಟನ್‌ಗೆ ವಲಸೆ ಬಂದಿದ್ದರು.

ಶೈಕ್ಷಣಿಕ ಜೀವನದಲ್ಲಿ ಅಕ್ಷತಾ ಮೂರ್ತಿ ಎಂಟ್ರಿ.. ಸುನಕ್ ವಿಂಚೆಸ್ಟರ್ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ನಂತರ ಆಕ್ಸ್‌ಫರ್ಡ್‌ನ ಲಿಂಕನ್ ಕಾಲೇಜಿನಲ್ಲಿ ತತ್ವಶಾಸ್ತ್ರ, ರಾಜಕೀಯ ಮತ್ತು ಅರ್ಥಶಾಸ್ತ್ರವನ್ನು (ಪಿಪಿಇ) ಅಧ್ಯಯನ ಮಾಡಿದರು. ನಂತರ ಕ್ಯಾಲಿಫೋರ್ನಿಯಾದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಫುಲ್‌ಬ್ರೈಟ್ ಸ್ಕಾಲರ್ ಆಗಿ ಎಂಬಿಎ ಪಡೆದರು. ಸ್ಟ್ಯಾನ್‌ಫೋರ್ಡ್‌ನಲ್ಲಿ ಓದುತ್ತಿದ್ದಾಗ, ಅವರು ತಮ್ಮ ಭಾವಿ ಪತ್ನಿ ಅಕ್ಷತಾ ಮೂರ್ತಿ ಅವರನ್ನು ಭೇಟಿಯಾದರು. ಅಕ್ಷತಾ ಇನ್ಫೋಸಿಸ್ ಸ್ಥಾಪಿಸಿದ ಭಾರತೀಯ ಬಿಲಿಯನೇರ್ ಉದ್ಯಮಿ ಎನ್.ಆರ್. ನಾರಾಯಣ ಮೂರ್ತಿಯವರ ಮಗಳು. ಸುನಕ್ ಮತ್ತು ಅಕ್ಷತಾ 2009 ವಿವಾಹವಾಗಿದ್ದು, ದಂಪತಿಗೆ ಅನುಷ್ಕಾ ಮತ್ತು ಕೃಷ್ಣ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಜೀವನದಲ್ಲಿ ಏರಿಳಿತ ಕಂಡಿರುವ ರಿಷಿ ಸುನಕ್​ ಈ ಹಿಂದೆ ಪ್ರಧಾನಿ ಹುದ್ದೆ ವಂಚಿತರಾಗಿದ್ದು ಮಾತ್ರವಲ್ಲದೆ, ಕಳೆದ ಎರಡು ವರ್ಷಗಳಲ್ಲಿ ಜೀವನದಲ್ಲಿ ಹಲವಾರು ಏರಿಳಿತಗಳನ್ನು ಕಂಡಿದ್ದಾರೆ. 2020ರಲ್ಲಿ ತಮ್ಮ 39ನೇ ವಯಸ್ಸಿನಲ್ಲಿ ಬ್ರಿಟಿಷ್ ಕ್ಯಾಬಿನೆಟ್​ನಲ್ಲಿ ನಾಲ್ಕನೇ ಅತಿ ಕಿರಿಯ ವಯಸ್ಸಿನ ಖಜಾನೆ ಚಾನ್ಸಲರ್ ಆಗಿದ್ದರು. ಬ್ರಿಟನ್​ನ ಅತಿ ಸೆಕ್ಸಿಯೆಸ್ಟ್​ ಎಂಪಿ ಎಂದು ನಾಮಕರಣಗೊಂಡಿದ್ದರು ಹಾಗೂ ತಮ್ಮ ಹೆಂಡತಿಯೊಂದಿಗೆ 730 ಪೌಂಡ್ ಸಂಪತ್ತು ಹೊಂದಿದ್ದ ಇವರು ಬ್ರಿಟನ್​ನ 222ನೇ ಅತಿ ಸಿರಿವಂತ ವ್ಯಕ್ತಿ ಖ್ಯಾತಿಗೆ ಭಾಜನರಾಗಿದ್ದಾರೆ. ಏಪ್ರಿಲ್ 2022 ರಲ್ಲಿ ಸುನಕ್ ಅವರು ತಮ್ಮ ಶ್ರೀಮಂತ ಪತ್ನಿಯ ತೆರಿಗೆ ಪಾವತಿ ವಿಚಾರದಲ್ಲಿ ತೀವ್ರ ಟೀಕೆಗಳನ್ನು ಎದುರಿಸಬೇಕಾಯಿತು.

ರಿಷಿ ಬ್ರಿಟನ್‌ ಸಾರಥಿಯಾದ್ರೆ, ಮುಂದಿವೆ ಸವಾಲುಗಳ ಸರಮಾಲೆ.. ಬ್ರಿಟನ್ ಅತಿ ದೊಡ್ಡ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿರುವ ಈ ಸಮಯದಲ್ಲಿ ಜೀವನ ವೆಚ್ಚ, ಹಣದುಬ್ಬರ ದರ ಶೇ 13ರ ಆಸುಪಾಸಿನಲ್ಲಿದೆ. ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಇಂಧನ ಬೆಲೆಗಳಲ್ಲಿ ತೀವ್ರ ಏರಿಕೆ, ನಿರುದ್ಯೋಗ, ರಾಜಕೀಯ ಅಸ್ಥಿರತೆ ಮುಂತಾದ ಸವಾಲುಗಳ ಮಧ್ಯೆ ರಿಷಿ ಸುನಕ್ ಬ್ರಿಟನ್​ ಅನ್ನು ಹೇಗೆ ಮುನ್ನಡೆಸುತ್ತಾರೆ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ: ಬ್ರಿಟನ್​ ಪ್ರಧಾನಿ ರೇಸ್​​​​​​​​​​ನಲ್ಲಿ ಮತ್ತೆ ಮುಂಚೂಣಿಗೆ ಬಂದ ಸುನಕ್​​..100 ಸಂಸದರ ಬೆಂಬಲ ಪಡೆದು ಮುನ್ನಡೆ!

Last Updated : Oct 24, 2022, 7:00 PM IST

ABOUT THE AUTHOR

...view details