ಮುಂಬೈ (ಮಹಾರಾಷ್ಟ್ರ): ತೆಲುಗು ಖ್ಯಾತ ನಟ ಮಹೇಶ್ ಬಾಬು ತಮ್ಮ ಹಿರಿಯ ಸಹೋದರ ಘಟ್ಟಮನೇನಿ ರಮೇಶ್ ಬಾಬು ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. ಹಾಗೆಯೇ, ತಮಗೆ ಧೈರ್ಯ ತುಂಬಿದ್ದಕ್ಕಾಗಿ ಕೃತಜ್ಞತೆ ಎಂದಿದ್ದಾರೆ.
ಸೂಪರ್‌ಸ್ಟಾರ್ ಕೃಷ್ಣ ಅವರ ಪುತ್ರರಾಗಿದ್ದ 56 ವರ್ಷದ ರಮೇಶ್ ಬಾಬು ಅನಾರೋಗ್ಯ ಸಮಸ್ಯೆಯಿಂದ ಶನಿವಾರ ರಾತ್ರಿ ಹೈದರಾಬಾದ್‌ನಲ್ಲಿ ನಿಧನರಾಗಿದ್ದಾರೆ. ಶನಿವಾರ ರಾತ್ರಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಹೇಶ್ ಬಾಬು ಈ ಸಂಬಂಧ ಟ್ವೀಟ್ ಮಾಡಿ, ತಮ್ಮ'ಅಣ್ಣಯ್ಯ'ನ ಬಗ್ಗೆ ಭಾವನಾತ್ಮಕವಾಗಿ ಬರೆದಿದ್ದಾರೆ. ನೀವು ನನಗೆ ಸ್ಫೂರ್ತಿಯಾಗಿದ್ದಿರಿ, ನೀವು ನನ್ನ ಶಕ್ತಿಯಾಗಿದ್ದಿರಿ, ನೀವು ನನ್ನ ಧೈರ್ಯವಾಗಿದ್ದಿರಿ, ನೀವು ನನ್ನ ಸರ್ವಸ್ವವಾಗಿದ್ದಿರಿ, ನೀವು ಇಲ್ಲದಿದ್ದರೆ ನಾನು ಇಂದು ಇರುವ ಅರ್ಧದಷ್ಟು ಸಹ ಮನುಷ್ಯನಾಗಿರಲಿಲ್ಲ. ನೀವು ಮಾಡಿದ ಎಲ್ಲಾ ಕಾರ್ಯಕ್ಕೂ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಈಗ ನೀವು ಸುಮ್ಮನೇ ವಿಶ್ರಮಿಸಿ... ಲವ್ ಯು ಎಂದೆಂದಿಗೂ ಯಾವಾಗಲೂ. ಈ ಜೀವನದಲ್ಲಿ ನೀವು ಯಾವಾಗಲೂ ನನ್ನ 'ಅಣ್ಣಯ್ಯ' ಎಂದು ಬರೆದಿದ್ದಾರೆ.
ರಮೇಶ್ ಬಾಬು ಅವರು ತಮ್ಮ ತಂದೆ ಕೃಷ್ಣ ಅವರ ಚಲನಚಿತ್ರಗಳಲ್ಲಿ ಬಾಲ ಕಲಾವಿದರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ನಂತರ 1997ರಲ್ಲಿ ಸಾಮ್ರಾಟ್, ಬಜಾರ್ ರೌಡಿ, ಅಣ್ಣಾ ಚೆಲ್ಲೆಲು ಮತ್ತು ಎನ್ಕೌಂಟರ್ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.