ಚೆನ್ನೈ:ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ 21 ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಆಡಳಿತಾರೂಢ ಡಿಎಂಕೆ ಪಕ್ಷ ಜಯಭೇರಿ ಬಾರಿಸಿದ್ದು, ಈಗ ಅಧಿಕಾರ ಹಂಚಿಕೆ ಸಂಬಂಧ ಮೈತ್ರಿ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಡಿಎಂಕೆ ಸದಸ್ಯರು ಚುನಾವಣೆಯಲ್ಲಿ ನಿಂತು ಗೆದ್ದಿದ್ದರೂ, ಮೈತ್ರಿ ಪಕ್ಷಗಳಿಗೋಸ್ಕರ ಅವರನ್ನು ಅಧಿಕಾರದಿಂದ ದೂರ ಉಳಿಯುವಂತೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸೂಚಿಸಿದ್ದಾರೆ. ಇದು ಪಕ್ಷದ ನಿಷ್ಠರ ಕೋಪಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ನಗರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಡಿಎಂಕೆ ಪಕ್ಷ ಶೇ.90ರಷ್ಟು ಸ್ಥಾನಗಳನ್ನು ಪಡೆದು ಪ್ರಚಂಡ ಗೆಲುವು ಸಾಧಿಸಿದೆ. ಇದರಲ್ಲಿ ನಗರಸಭೆಯ ನಾಯಕರು, ಮೇಯರ್, ಉಪ ಮೇಯರ್ ಆಗಿ ಡಿಎಂಕೆ ಸದಸ್ಯರು ಆಯ್ಕೆಯಾಗಿದ್ದಾರೆ. ಆದರೆ, ಮೈತ್ರಿ ಪಕ್ಷಗಳ ವಿರುದ್ಧ ಸ್ಪರ್ಧಿಸಿ ಗೆದ್ದ ಡಿಎಂಕೆ ಅಭ್ಯರ್ಥಿಗಳಿಗೆ ತಮ್ಮ- ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವಂತೆ ಸ್ವಾಲಿನ್ ತಾಕೀತು ಮಾಡಿದ್ದಾರೆ. ಅಲ್ಲದೇ, ಮೈತ್ರಿ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಬೇಕು. ಇಲ್ಲವಾದಲ್ಲಿ ಮೈತ್ರಿ ನಿಮಯ ಪಾಲನೆ ಉಲ್ಲಂಘಿಸಿ ಗೆದ್ದವರನ್ನು ಪಕ್ಷದಿಂದಲೇ ಹೊರಹಾಕಬೇಕಾಗುತ್ತದೆ ಎಂದು ಸ್ವಾಲಿನ್ ಎಚ್ಚರಿಸಿದ್ದಾರೆ.