ಲತೇಹಾರ್:ಜಾರ್ಖಂಡ್‌ನ ಲತೇಹರ್ ಜಿಲ್ಲೆಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಬುಡಕಟ್ಟು ಜನಾಂಗದ ವ್ಯಕ್ತಿಯ ಶವ ಸಾಗಿಸಲು ಅಧಿಕಾರಿಗಳು ಆ್ಯಂಬುಲೆನ್ಸ್ ಸೇವೆ ನಿರಾಕರಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಕುಟುಂಬದವರು ಸೈಕಲ್ ರಿಕ್ಷಾದಲ್ಲಿಯೇ ಶವವನ್ನು ಮನೆಗೆ ಕೊಂಡೊಯ್ದಿದ್ದಾರೆ. ಲತೇಹಾರ್ ಜಿಲ್ಲೆಯ ಬಲುಮತ್ ಬ್ಲಾಕ್ ಪ್ರಧಾನ ಕಛೇರಿಯಲ್ಲಿ ಗುರುವಾರ ರಾತ್ರಿ ಘಟನೆ ನಡೆದಿದೆ.
ನಡಿ ಪರ್ಬಲುಮಠ ಪೊಲೀಸ್ ಠಾಣಾ ವ್ಯಾಪ್ತಿಯ ಬಸಿಯಾ ಪಂಚಾಯಿತಿಯ ತೆಮ್ರಬಾರ್ ಗ್ರಾಮದ ನಿವಾಸಿ ಚಂದ್ರು ಲೋಹ್ರಾ ಎಂಬುವವರು ವಿಪರೀತ ಮದ್ಯ ಸೇವನೆಯಿಂದ ಅಸ್ವಸ್ಥರಾಗಿದ್ದರು. ಕುಟುಂಬಸ್ಥರು ಅವರನ್ನು ಬಲುಮತ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದು, ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ಅವರ ಮರಣದ ನಂತರ ಮೃತರ ಸೋದರಳಿಯ ಟೋಲು ಲೋಹ್ರಾ ಅವರು ಆಸ್ಪತ್ರೆಯ ಆಡಳಿತದಿಂದ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದರು. ಆದರೆ ಆಡಳಿತ ಮಂಡಳಿ ನಿರ್ದಾಕ್ಷಿಣ್ಯವಾಗಿ ನಿರಾಕರಿಸಿದೆ ಎಂದು ಮೂಲಗಳು ತಿಳಿಸಿವೆ.