ಸೂರತ್(ಗುಜರಾತ್): ಭಾರತ 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿದ್ದು ಎಲ್ಲೆಡೆ 'ಆಜಾದಿ ಕಾ ಅಮೃತ ಮಹೋತ್ಸವ' ಆಚರಣೆ ಮಾಡಲಾಗ್ತಿದೆ. ಸ್ವಾತಂತ್ರ್ಯ ಸಮಯದಲ್ಲಿ ಅನೇಕ ವೀರಾಂಗನೆಯರು ಪ್ರಾಣಾರ್ಪಣೆ ಮಾಡಿದ್ದಾರೆ. ಈಗಲೂ ಅನೇಕರು ದೇಶದ ಒಳಿತಿಗಾಗಿ ತಮ್ಮ ಪ್ರಾಣ ಪಣಕ್ಕಿಟ್ಟು ದೇಶ ಹಾಗು ಜನಸೇವೆ ಮಾಡುತ್ತಿದ್ದಾರೆ. ಅಂತಹ ವೀರಾಗ್ರಣಿಗಳ ಸಾಲಿನಲ್ಲಿ ಗುಜರಾತ್ನ ಸೂರತ್ನಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಫಾರೆಸ್ಟ್ ಆಫೀಸರ್(ಆರ್‌ಎಫ್‌ಒ) ಅಶ್ವಿನಾ ಪಾಟೀಲ್ ಕೂಡ ಒಬ್ಬರು.
ತಾಪಿ ವಿಭಾಗದ ಖೇರವಾಡ ರೇಂಜ್ ಆಫೀಸರ್ ಆಗಿ ಕೆಲಸ ಮಾಡುತ್ತಿರುವ ಇವರು ಮರಗಳ್ಳತನ ಮಾಫಿಯಾ ವಿರುದ್ಧ ನಿರಂತರ ಸಮರ ಸಾರುತ್ತಿದ್ದಾರೆ. ರಾಯಲ್ ಎನ್‌ಫೀಲ್ಡ್ ಬೈಕ್ ಮೂಲಕ ಅರಣ್ಯ ಪ್ರದೇಶದಲ್ಲಿ ಒಬ್ಬಂಟಿಯಾಗಿ ಈಕೆ ಗಸ್ತು ತಿರುಗುತ್ತಾರೆ. ಇಲ್ಲಿಯವರೆಗೆ, ಮೂರು ಸಲ ಮರಗಳ್ಳರಿಂದ ಮಾರಣಾಂತಿಕವಾಗಿ ಹಲ್ಲೆಗೂ ಒಳಗಾಗಿದ್ದಾರೆ.
10,200 ಹೆಕ್ಟೇರ್ ಅರಣ್ಯ ರಕ್ಷಣೆ:ಮಹಿಳಾ ಅರಣ್ಯಾಧಿಕಾರಿ ಅಶ್ವಿನಾ ತಾವು ಸೇವೆ ಸಲ್ಲಿಸುತ್ತಿರುವ ಪ್ರದೇಶದಲ್ಲಿ 10,200 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಮರಗಳ್ಳರಿಂದ ರಕ್ಷಿಸಿದ್ದಾರೆ. ಇವರ ಶೌರ್ಯ ಮತ್ತು ಕರ್ತವ್ಯ ನಿಷ್ಠೆಯನ್ನು ಈ ಪ್ರದೇಶದ ಜನರು ಕೊಂಡಾಡುತ್ತಾರೆ. ಅಶ್ವಿನಾ ಪಟೇಲ್ ಕೆಲಸ ನಿರ್ವಹಿಸುತ್ತಿರುವ ಅರಣ್ಯ ಪ್ರದೇಶದಲ್ಲಿ ಚಿರತೆ, ಹುಲಿ ಸೇರಿದಂತೆ ಅನೇಕ ಕಾಡುಪ್ರಾಣಿಗಳು ಹೆಚ್ಚಾಗಿವೆ. ಇವುಗಳಿಂದ ರಕ್ಷಣೆ ಮಾಡಿಕೊಳ್ಳುತ್ತಾ ಆರ್‌ಎಫ್‌ಒ ಅರಣ್ಯ ಪ್ರದೇಶದಲ್ಲಿ ಗಸ್ತು ತಿರುಗುತ್ತಾರೆ.