ನವದೆಹಲಿ:ಭಾರತ, ರಷ್ಯಾ ಮತ್ತು ಇತರೆ ದೇಶಗಳ ನಡುವೆ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಶುಕ್ರವಾರದಿಂದ ಎರಡು ದಿನಗಳ ಕಾಲ ರಾಷ್ಟ್ರ ರಾಜಧಾನಿಯಲ್ಲಿ MICE 2023 ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ವೇಳೆ ಹೈದರಾಬಾದ್‌ನಲ್ಲಿರುವ ವಿಶ್ವದ ಅತಿದೊಡ್ಡ ಚಲನಚಿತ್ರ ನಗರವಾದ ರಾಮೋಜಿ ಫಿಲ್ಮ್ ಸಿಟಿಯ (ಆರ್‌ಎಫ್‌ಸಿ) ಸ್ಟಾಲ್ ಹೆಚ್ಚಿನ ಸಂಖ್ಯೆಯಲ್ಲಿ ಸಂದರ್ಶಕರ ಗಮನ ಸೆಳೆಯಿತು.
ದೆಹಲಿಯ ಕಾರ್ಕರ್ಡೂಮಾದಲ್ಲಿ ನಡೆಯುತ್ತಿರುವ ಎರಡು ದಿನಗಳ MICE 2023 ಕಾರ್ಯಕ್ರಮವನ್ನು ಮಾಸ್ಕೋ ನಗರ ಪ್ರವಾಸೋದ್ಯಮ ಸಮಿತಿಯ ಅಧ್ಯಕ್ಷ ಎವ್ಗೆನಿ ಕೊಜ್ಲೋವ್ (Evgeny Kozlov) ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಿಶ್ವದ ಅತಿ ದೊಡ್ಡ ಫಿಲ್ಮ್ ಸಿಟಿ ರಾಮೋಜಿ ಫಿಲಂ ಸಿಟಿ ವತಿಯಿಂದ ಸ್ಟಾಲ್ ಕೂಡ ಮಾಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಪ್ರವಾಸಿ ತಾಣದ ವೈಶಿಷ್ಟ್ಯತೆ ಹಾಗೂ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದರು. ಈ ವೇಳೆ RFC ಪ್ರತಿನಿಧಿಗಳು ಹೈದರಾಬಾದ್‌ನ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾದ ರಾಮೋಜಿ ಫಿಲ್ಮ್ ಸಿಟಿ ಬಗ್ಗೆ ವಿವರಿಸಿದರು. ಸಿನಿಮಾ ಶೂಟಿಂಗ್, ಮದುವೆ ಸಮಾರಂಭ, ಕಾರ್ಪೊರೇಟ್ ಸಭೆಗಳು ಮತ್ತು ಇತರೆ ಕಾರ್ಯಕ್ರಮಗಳು ಸೇರಿದಂತೆ ಆರ್‌ಎಫ್‌ಸಿಯಲ್ಲಿ ನಡೆಯುವ ಘಟನೆಗಳ ಬಗ್ಗೆ ಪ್ರವಾಸಿಗರಿಗೆ ತಿಳಿಸಿದರು.
ಬಳಿಕ ಮಾತನಾಡಿದ ರಾಮೋಜಿ ಫಿಲ್ಮ್ ಸಿಟಿಯ ಸೀನಿಯರ್ ಜನರಲ್ ಮ್ಯಾನೇಜರ್ (ಮಾರ್ಕೆಟಿಂಗ್) ಟಿಆರ್‌ಎಲ್ ರಾವ್, 'ರಾಮೋಜಿ ಫಿಲ್ಮ್ ಸಿಟಿಯು ಸಿನಿಮಾ ಶೂಟಿಂಗ್, ಮದುವೆ, ಕಾರ್ಪೊರೇಟ್ ಸಭೆಗಳು ಮತ್ತು ಬ್ಯುಸಿನೆಸ್ ಸಮ್ಮಿಟ್‌ಗಳು ಸೇರಿದಂತೆ ಎಲ್ಲಾ ರೀತಿಯ ಕಾರ್ಯಕ್ರಮಗಳಿಗೆ ಸೂಕ್ತ ತಾಣವಾಗಿ ಹೊರಹೊಮ್ಮಿದೆ. ಫಿಲಂ ಸಿಟಿಯಲ್ಲಿ ಇದುವರೆಗೆ 3,500ಕ್ಕೂ ಹೆಚ್ಚು ಸಿನಿಮಾಗಳ ಚಿತ್ರೀಕರಣ ನಡೆದಿದೆ. ಇದಲ್ಲದೆ, ಪ್ರತಿ ವರ್ಷ 350 ರಿಂದ 400 ಸಮ್ಮೇಳನಗಳನ್ನು ಸಹ ಆಯೋಜಿಸಲಾಗುತ್ತದೆ. ಅಷ್ಟೇ ಅಲ್ಲದೆ, ಇಲ್ಲಿ ಪ್ರತಿ ವರ್ಷ 100 ರಿಂದ 125 ಮದುವೆಗಳನ್ನು ಆಯೋಜಿಸಲಾಗುತ್ತಿದ್ದು, ರಾಮೋಜಿ ಫಿಲ್ಮ್ ಸಿಟಿ ನೋಡಲು ಪ್ರತಿ ವರ್ಷ ಸುಮಾರು 20 ಲಕ್ಷ ಜನರು ಬರುತ್ತಾರೆ ಎಂದು ತಿಳಿಸಿದರು.