ಹೈದರಾಬಾದ್ (ತೆಲಂಗಾಣ): ತೆಲಂಗಾಣದ ಮುಖ್ಯಮಂತ್ರಿಯಾಗಿ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಅಧ್ಯಕ್ಷ ರೇವಂತ್ ರೆಡ್ಡಿ ಹೆಸರು ಅಂತಿಮಗೊಳಿಸಲಾಗಿದೆ. ಡಿಸೆಂಬರ್ 7ರಂದು ಅವರು ರಾಜ್ಯದ ಎರಡನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತೆಲಂಗಾಣ ಶಾಸಕಾಂಗ ಪಕ್ಷದ ಹೊಸ ನಾಯಕರಾಗಿ ರೇವಂತ್ ರೆಡ್ಡಿ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಇಂದು ಸಂಜೆ ಪ್ರಕಟಿಸಿದರು.
ತೆಲಂಗಾಣದ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಿರುವ ರೇವಂತ್ ರೆಡ್ಡಿ, ಇತರ ಹಿರಿಯ ನಾಯಕರೊಂದಿಗೆ ವ್ಯಾಪಕ ಪ್ರಚಾರ ಮಾಡಿದ ಡೈನಾಮಿಕ್ ನಾಯಕ. ತೆಲಂಗಾಣ ಜನತೆಯ ಆಕಾಂಕ್ಷೆಗಳು ಮತ್ತು ಅವರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುವುದು ಸರ್ಕಾರದ ಮೊದಲ ಮತ್ತು ಪ್ರಮುಖ ಆದ್ಯತೆಯಾಗಿದೆ ಎಂದು ಅವರು ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದರು.
ಇದೇ ವೇಳೆ, ತೆಲಂಗಾಣದಲ್ಲಿ ನಾವು ಎಲ್ಲ ನಾಯಕರ ಬಗ್ಗೆ ಗಮನ ಹರಿಸುತ್ತೇವೆ. ಇದು ಒನ್ ಮ್ಯಾನ್ ಶೋ ಅಲ್ಲ, ಕಾಂಗ್ರೆಸ್ ತಂಡವಾಗಿ ಮುನ್ನಡೆಯಲಿದೆ ಎಂದು ವೇಣುಗೋಪಾಲ್ ಹೇಳಿದರು. ಮಾಧ್ಯಮಗೋಷ್ಟಿಯಲ್ಲಿ ತೆಲಂಗಾಣ ಉಸ್ತುವಾರಿ ಮಾಣಿಕ್ ರಾವ್ ಠಾಕ್ರೆ, ಕರ್ನಾಟಕ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಉಪಸ್ಥಿತರಿದ್ದರು.
ರೇವಂತ್ ರೆಡ್ಡಿ ಬಗ್ಗೆ ರಾಹುಲ್ ಗಾಂಧಿ ಒಲವು: ಡಿ.3ರಂದು ಪ್ರಕಟವಾದ ತೆಲಂಗಾಣದ 119 ಸದಸ್ಯ ಬಲದ ವಿಧಾನಸಭೆಯ ಚುನಾವಣಾ ಫಲಿತಾಂಶದಲ್ಲಿ 64 ಸ್ಥಾನಗಳೊಂದಿಗೆ ಕಾಂಗ್ರೆಸ್ ಸರ್ಕಾರ ರಚನೆಗೆ ಬೇಕಾದ ಬಹುಮತ ಪಡೆದಿದೆ. ಇದರ ಬೆನ್ನಲ್ಲೇ ಕೈ ಪಾಳೆಯ ಸರ್ಕಾರ ರಚನೆ ಮತ್ತು ಮುಖ್ಯಮಂತ್ರಿ ಆಯ್ಕೆ ಕಸರತ್ತು ಶುರು ಮಾಡಿತ್ತು. ಹೈದರಾಬಾದ್ನಲ್ಲಿ ಸೋಮವಾರ ಚುನಾಯಿತ ಶಾಸಕರ ಅಭಿಪ್ರಾಯಗಳನ್ನು ಪಕ್ಷದ ವರಿಷ್ಠರು ಸಂಗ್ರಹಿಸಿದ್ದರು. ಆಗ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕನನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಹೈಕಮಾಂಡ್ಗೆ ವಹಿಸುವ ಸರ್ವಾನುಮತದ ನಿರ್ಣಯವನ್ನು ಶಾಸಕರು ಕೈಗೊಂಡಿದ್ದರು.
ಅಂತೆಯೇ, ಇಂದು ಮಲ್ಲಿಕಾರ್ಜುನ ಖರ್ಗೆ ಅವರ ದೆಹಲಿ ನಿವಾಸದಲ್ಲಿ ಸರ್ಕಾರ ರಚನೆ ಕುರಿತು ಸಭೆ ಮಹತ್ವದ ನಡೆಸಲಾಗಿತ್ತು. ಈ ಸಭೆಯಲ್ಲಿ ರಾಹುಲ್ ಗಾಂಧಿ, ವೇಣುಗೋಪಾಲ್, ಕರ್ನಾಟಕ ಉಪ ಮುಖ್ಯಮಂತ್ರಿ ಶಿವಕುಮಾರ್ ಪಾಲ್ಗೊಂಡಿದ್ದರು. ಸಭೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಮಾಣಿಕ್ ರಾವ್ ಠಾಕ್ರೆ ಅವರು ಶಾಸಕರ ಅಭಿಪ್ರಾಯದ ವರದಿಯನ್ನು ಮಂಡಿಸಿದ್ದರು. ಇದೇ ವೇಳೆ, ರಾಹುಲ್ ಗಾಂಧಿ ತೆಲಂಗಾಣದ ವಿಷಯದಲ್ಲಿ ''ನನ್ನ ಆಯ್ಕೆ ರೇವಂತ್ ರೆಡ್ಡಿ. ಅವರು ಮುಖ್ಯಮಂತ್ರಿ ಆಗಬೇಕು'' ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಸಿಎಂ ಆಯ್ಕೆಯನ್ನು ಪಕ್ಷ ಅಂತಿಮಗೊಳಿಸಿದೆ.
ಇದನ್ನೂ ಓದಿ:ತೆಲಂಗಾಣಕ್ಕೆ ನನ್ನ ಆಯ್ಕೆ ರೇವಂತ್ ರೆಡ್ಡಿ: ರಾಹುಲ್ ಗಾಂಧಿ