ನವದೆಹಲಿ:ಭಾರತದಿಂದ ಬೇರೆಡೆಗೆ ಕಳ್ಳ ಸಾಗಣೆಯಾಗಿದ್ದ ಅಥವಾ ಬೇರೆ ರಾಷ್ಟ್ರಕ್ಕೆ ರವಾನೆಯಾಗಿದ್ದ ಸುಮಾರು 157 ಪುರಾತನ ಕಲಾಕೃತಿ ಅಥವಾ ವಸ್ತುಗಳನ್ನು ಅಮೆರಿಕಕ್ಕೆ ಮರಳಿ ಭಾರತಕ್ಕೆ ತರಲಾಗುತ್ತಿದೆ ಎಂದು ಪ್ರಧಾನಮಂತ್ರಿ ಕಚೇರಿ ಮಾಹಿತಿ ನೀಡಿದೆ.
ಪ್ರಧಾನಿ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ್ದ ವೇಳೆಯಲ್ಲಿ ಅಮೆರಿಕದ ಪ್ರಾಧಿಕಾರಗಳು ಭಾರತಕ್ಕೆ ಸಂಬಂಧಿಸಿದ ಅತ್ಯಂತ ಪ್ರಾಚೀನ ವಸ್ತುಗಳನ್ನು ಹಸ್ತಾಂತರ ಮಾಡಿವೆ.
2014ರಲ್ಲಿ ಪ್ರಧಾನಿಯಾಗಿ ಮೋದಿ ಅಧಿಕಾರ ಸ್ವೀಕಾರ ಮಾಡಿದಾಗಿನಿಂದಲೂ ಭಾರತಕ್ಕೆ ಸಂಬಂಧಿಸಿದ, ಭಾರತದ ಐತಿಹಾಸಿಕತೆಯನ್ನು, ವೈಭವವನ್ನು ಬಿಂಬಿಸುವ ಪ್ರಾಚೀನ ವಸ್ತುಗಳನ್ನು ಮರಳಿ ತರಲು ಪ್ರಾಮುಖ್ಯತೆ ನೀಡಿದ್ದರು.
ತಾವು ಅಧಿಕಾರ ವಹಿಸಿಕೊಂಡ ನಂತರ ಮುಕ್ಕಾಲು ಭಾಗದಷ್ಟು ಪುರಾತನ ವಸ್ತುಗಳನ್ನು ಭಾರತಕ್ಕೆ ತರಲಾಗಿದೆ. ಅಮೆರಿಕ ಈ ವಸ್ತುಗಳನ್ನು ಭಾರತಕ್ಕೆ ಹಸ್ತಾಂತರ ಮಾಡಿರುವುದು ಕ್ವಾಡ್ ಸಮ್ಮೇಳನ ಯಶಸ್ವಿಯಾಗಿದೆ ಎಂಬುದನ್ನೂ ಬಿಂಬಿಸುತ್ತದೆ ಎನ್ನಲಾಗಿದೆ.
ಪುರಾತನ ವಸ್ತುಗಳನ್ನು ಭಾರತಕ್ಕೆ ಹಿಂದಿರುಗಿಸಿದ್ದಕ್ಕಾಗಿ ಅಮೆರಿಕದ ಅಧಿಕಾರಿಗಳಿಗೆ ಪ್ರಧಾನಿ ಮೋದಿ ಮೆಚ್ಚುಗೆಯನ್ನು ತಿಳಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾರತಕ್ಕೆ ಮರಳಿ ತರುತ್ತಿರುವುದೇನು?
ಪ್ರಧಾನಿ ಮೋದಿ ಹಿಂದೂ,ಜೈನ ಮತ್ತು ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಕಲಾಕೃತಿಗಳನ್ನು ವಾಪಸ್ ತರಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇದರಲ್ಲಿ ಕ್ರಿಸ್ತಪೂರ್ವ 2000ಕ್ಕೆ ಸೇರಿದ ಮಣ್ಣಿನ ಕಲಾಕೃತಿಗಳು, ಕಲಾಕೃತಿಗಳು, 11 ಮತ್ತು 14ನೇ ಶತಮಾನಕ್ಕೆ ಸೇರಿದ ವಸ್ತುಗಳು ಮತ್ತು 12ನೇ ಶತಮಾನಕ್ಕೆ ಸೇರಿದ ಕಂಚಿನ ನಟರಾಜನ ವಿಗ್ರವೂ ಸೇರಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿವೆ.