ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) :ಕಾಶ್ಮೀರ ಕಣಿವೆಯ ಬಾರಾಮುಲ್ಲಾ ಜಿಲ್ಲೆಯಲ್ಲಿ ಭಾನುವಾರ ಮುಂಜಾನೆ ಆಜಾನ್ ಕೂಗುವಾಗ ನಿವೃತ್ತ ಪೊಲೀಸ್ ಅಧಿಕಾರಿಯನ್ನು ಅಪರಿಚಿತ ಉಗ್ರರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ನಿವೃತ್ತ ಅಥವಾ ರಜೆಯ ಮೇಲಿದ್ದ ಪೊಲೀಸ್ ಅಧಿಕಾರಿಗಳ ಮೇಲೆ ನಡೆದ ನಾಲ್ಕನೇ ದಾಳಿ ಇದಾಗಿದೆ.
ಮಾಜಿ ಎಸ್ಪಿ ಮುಹಮ್ಮದ್ ಶಫಿ ಮಿರ್ ಉಗ್ರರ ದಾಳಿಗೆ ಮೃತಪಟ್ಟವರು. ಬಾರಾಮುಲ್ಲಾ ಜಿಲ್ಲೆಯ ಗಂಟ್ಮುಲ್ಲಾದ ಶೀರಿಯ ಮಸೀದಿಯಲ್ಲಿ ಅವರು ಅಜಾನ್ (ಪ್ರಾರ್ಥನೆ) ಕೂಗುತ್ತಿದ್ದಾಗ, ಏಕಾಏಕಿ ದಾಳಿ ನಡೆಸಿ ಉಗ್ರರು ಗುಂಡಿಕ್ಕಿ ಕೊಂದಿದ್ದಾರೆ. ಘಟನಾ ಸ್ಥಳದ ಪ್ರದೇಶವನ್ನು ಸುತ್ತವರಿಯಲಾಗಿದೆ ಎಂದು ಪೊಲೀಸರು ತಿಳಿಸಿದರು.
68 ವರ್ಷದ ಮಿರ್ ಅವರು ಪೊಲೀಸ್ ಸೇವೆಯಿಂದ ನಿವೃತ್ತರಾಗಿದ್ದರು. ಅವರು ಸಬ್ ಇನ್ಸ್‌ಪೆಕ್ಟರ್ ಆಗಿ ಇಲಾಖೆಗೆ ಸೇರಿದ್ದರು. ಪೊಲೀಸ್ ಸೂಪರಿಂಟೆಂಡೆಂಟ್ (ಎಸ್ಪಿ) ಆಗಿ ಬಡ್ತಿ ಪಡೆದಿದ್ದರು. ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಆಜಾನ್ ಕೂಗುತ್ತಿದ್ದ ಮಾಜಿ ಅಧಿಕಾರಿ:ಶಫಿ ಮಿರ್ ಅವರು ಪೊಲೀಸ್ ಸೇವೆಯಿಂದ ನಿವೃತ್ತರಾದ ನಂತರ, ಇಲ್ಲಿನ ಮಸೀದಿಯಲ್ಲಿ ದಿನಕ್ಕೆ ಐದು ಬಾರಿ ಆಜಾನ್ ನೀಡುತ್ತಿದ್ದರು. ಇಂದು ಮುಂಜಾನೆ ಅವರು ಮಸೀದಿಯೊಳಗೆ ಹೋಗಿ ಆಜಾನ್ ಅರ್ಧದಷ್ಟು ಓದಿದ್ದರು. ಈ ವೇಳೆ ಅಪರಿಚಿತ ಉಗ್ರರು ಮಸೀದಿಯೊಳಗೆ ನುಗ್ಗಿ ಮಿರ್ ಮೇಲೆ ಗುಂಡಿನ ದಾಳಿ ನಡೆಸಿದರು ಎಂದು ಅಧಿಕಾರಿಯ ಸಂಬಂಧಿಕರು ಮಾಹಿತಿ ನೀಡಿದರು. ಸದ್ಯ ಮೃತದೇಹವನ್ನು ವೈದ್ಯಕೀಯ, ಕಾನೂನು ಪಾಲನೆಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಿ ಇಂದು ಅಂತ್ಯಕ್ರಿಯೆ ಮಾಡಲಾಗುತ್ತದೆ.
ನಿವೃತ್ತ ಅಧಿಕಾರಿಗಳ ಮೇಲಿನ ನಾಲ್ಕನೇ ದಾಳಿ:ಉಗ್ರರು ದಾಳಿಯ ಸ್ವರೂಪವನ್ನು ಬದಲಿಸಿಕೊಂಡಿದ್ದು, ರಜೆಯ ಮೇಲೆ ಅಥವಾ ಕರ್ತವ್ಯದಿಂದ ನಿವೃತ್ತರಾದ ಪೊಲೀಸರನ್ನು ಟಾರ್ಗೆಟ್ ಮಾಡಿಕೊಂಡಿದ್ದಾರೆ. ಈವರೆಗೂ ನಡೆದ ಈ ಮಾದರಿಯ ನಾಲ್ಕನೇ ದಾಳಿ ಇದಾಗಿದೆ. ಅಕ್ಟೋಬರ್‌ನಲ್ಲಿ ಶ್ರೀನಗರದ ಈದ್ಗಾದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಮಸ್ರೂರ್ ಅಲಿ ಅವರು ರಜೆಯ ಮೇಲಿದ್ದಾಗ ಕ್ರಿಕೆಟ್ ಆಡುವ ವೇಳೆ ದಾಳಿಗೀಡಾಗಿ ಕೊಲ್ಲಲ್ಪಟ್ಟರು. ಬಾರಾಮುಲ್ಲಾದ ವೈಲೂ ಕ್ರಾಲ್‌ಪೋರಾ ನಿವಾಸಿ, ರಜೆಯ ಪಡೆದುಕೊಂಡಿದ್ದ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಗುಲಾಮ್ ಮುಹಮ್ಮದ್ ದಾರ್ ಅವರನ್ನು ಅಕ್ಟೋಬರ್ 31 ರಂದು ಉಗ್ರರು ಹತ್ಯೆ ಮಾಡಿದ್ದರು. ಡಿಸೆಂಬರ್ ಆರಂಭದಲ್ಲಿ ಶ್ರೀನಗರದಲ್ಲಿ ಪೊಲೀಸ್ ಪೇದೆ ಮುಹಮ್ಮದ್ ಹಫೀಜ್ ಚಾಕ್ ಮೇಲೆ ಹಲ್ಲೆ ನಡೆಸಲಾಗಿತ್ತು. ದಾಳಿಯಲ್ಲಿ ಪೊಲೀಸ್ ಗಾಯಗೊಂಡಿದ್ದಾರೆ. ಬಳಿಕ ದಾಳಿಕೋರರನ್ನು ಪೊಲೀಸರು ಬಂಧಿಸಿದ್ದರು.
370 ನೇ ವಿಧಿ ರದ್ದುಗೊಳಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪರಿಸ್ಥಿತಿ ಸುಧಾರಿಸಿದೆ. ಉಗ್ರರ ದಾಳಿಗಳನ್ನು ಹಿಮ್ಮೆಟ್ಟಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಆಡಳಿತವು ಹೇಳುತ್ತಿರುವ ನಡುವೆಯೇ ಕಾಶ್ಮೀರ ಕಣಿವೆಯಲ್ಲಿ ಉಗ್ರರು ಪೊಲೀಸರ ಮೇಲೆ ದಾಳಿಯನ್ನು ತೀವ್ರಗೊಳಿಸಿರುವುದು ಆತಂಕದ ವಿಚಾರವಾಗಿದೆ.
ಇದನ್ನೂ ಓದಿ:ಪೂಂಚ್ ದಾಳಿಯಲ್ಲಿ ಮೃತಪಟ್ಟ ನಾಗರಿಕರಿಗೆ ಆರ್ಥಿಕ, ಕಾನೂನು ನೆರವು: ಜಮ್ಮು ಕಾಶ್ಮೀರ ಸರ್ಕಾರ