ಹೈದರಾಬಾದ್:ಮೆಕ್ಡೊನಾಲ್ಡ್ ಕಂಪನಿಯಲ್ಲಿ ಕೆಲಸ ಮಾಡುವ 19 ವರ್ಷದ ಯುವಕ ಕೆಲಸ ಮುಗಿಸಿ ಮಧ್ಯರಾತ್ರಿ ಬರೋಬ್ಬರಿ 10 ಕಿಲೋ ಮೀಟರ್ ಓಡುತ್ತಲೇ ಮನೆ ಸೇರುವ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಈತನಿಗೆ ಅದೃಷ್ಟ ಒಲಿದು ಬಂದಿದೆ.
ಭಾರತೀಯ ಸೇನೆ ಸೇರುವ ಉದ್ದೇಶದಿಂದ ಈ ಯುವಕ ಪ್ರತಿದಿನ ಹತ್ತು ಕಿ.ಮೀ ಓಡುತ್ತಲೇ ತನ್ನ ಮನೆ ಸೇರಿಕೊಳ್ಳುತ್ತಿದ್ದ. ಈತನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನಿವೃತ್ತ ಜನರಲ್ ಸತೀಸ್ ದುವಾ ಎಂಬುವವರು ಟ್ವೀಟ್ ಮಾಡಿದ್ದು, ಪ್ರದೀಪ್ ಮೆಹ್ರಾಗೆ ಭಾರತೀಯ ಸೇನೆ ಸೇರಲು ಸಕಲ ರೀತಿಯ ತರಬೇತಿ ನೀಡಲು ಸಿದ್ಧರಾಗಿರುವುದಾಗಿ ಪ್ರಕಟಿಸಿದ್ದಾರೆ.
ಇದನ್ನೂ ಓದಿ:ಕೆಲಸ ಮುಗಿಸಿ ಮಧ್ಯರಾತ್ರಿ10 ಕಿ.ಮೀ ಓಡುತ್ತಲೇ ಮನೆ ಸೇರುವ ಯುವಕ: ಯಾಕೆ ಗೊತ್ತಾ?
'ಭಾರತೀಯ ಸೇನೆ ಸೇರಲು ದೈಹಿಕವಾಗಿ ಸದೃಢರಾಗಿರಬೇಕು. ಬೆಳಗ್ಗೆ ವ್ಯಾಯಾಮ, ಜಾಗಿಂಗ್, ಜಿಮ್ಗೆ ಹೋಗಲು ನನ್ನ ಬಳಿ ಸಮಯವಿಲ್ಲ. ಹಾಗಾಗಿ, ಮಧ್ಯರಾತ್ರಿವರೆಗೂ ಕೆಲಸ ಮಾಡುತ್ತೇನೆ. ನಂತರ ಮನೆಗೆ ಓಡುತ್ತಲೇ ಹಿಂತಿರುಗುತ್ತೇನೆ. ಸಿಗುವ ವೇತನದಲ್ಲೇ ತಾಯಿಯ ಆರೋಗ್ಯ ನೋಡಿಕೊಳ್ಳಬೇಕು, ಮನೆ ಖರ್ಚು ನಿಭಾಯಿಸಬೇಕು. ಜೊತೆಗೆ ನನ್ನ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಬೇಕೆಂದು ಪ್ರತಿ ರಾತ್ರಿ ನಗರದ ರಸ್ತೆಗಳಲ್ಲಿ 10 ಕಿ.ಮೀ ಓಡುವ ಮೂಲಕ ಆರ್ಮಿ ಸೇರಿಕೊಳ್ಳಲು ತಯಾರಿ ನಡೆಸುತ್ತಿದ್ದೇನೆ' ಎಂದು ಯುವಕ ಹೇಳಿಕೊಂಡಿದ್ದ. ಈ ವಿಡಿಯೋ ತುಣುಕನ್ನು ಚಿತ್ರ ನಿರ್ಮಾಪಕ ವಿನೋದ್ ಕಪ್ರಿ ಟ್ವೀಟ್ ಮಾಡಿದ್ದರು.
ಇದನ್ನು ಗಮನಿಸಿದ ಲೆಫ್ಟಿನೆಂಟ್ ಜನರಲ್ ಸತೀಶ್ ದುವಾ, ಭಾರತೀಯ ಸೇನಾ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಎಲ್ಲ ರೀತಿಯಿಂದಲೂ ತಾವು ಸಹಾಯ ಮಾಡುವುದಾಗಿ ಪ್ರಕಟಿಸಿದ್ದಾರೆ. ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ರಾಣಾ ಅವರೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದು, ತಮ್ಮ ರೆಜಿಮೆಂಟ್ನಲ್ಲಿ ನೇಮಕಾತಿ ಮಾಡಿಕೊಳ್ಳಲು ತರಬೇತಿ ನೀಡುವುದಾಗಿ ತಿಳಿಸಿದ್ದಾಗಿ ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಮೂಲತಃ ಉತ್ತರಾಖಂಡ ನಿವಾಸಿ ಪ್ರದೀಪ್ ಮೆಹ್ರಾ (19) ನೋಯ್ಡಾದಲ್ಲಿ ಮೆಕ್‌ಡೊನಾಲ್ಡ್‌ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಾನೆ.