ನವದೆಹಲಿ :ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಯುತ್ತಿದ್ದು, ದೆಹಲಿ-ಯುಪಿ ಗಡಿಯಲ್ಲಿರುವ ಗಾಜಿಪುರದಲ್ಲಿ ರೈತ ಪ್ರತಿಭಟನೆಗೆ ಸುಮಾರು ಸಾವಿರ ಮಂದಿ ನಿವೃತ್ತ ಸೈನಿಕರು ಸಂಪೂರ್ಣ ಬೆಂಬಲ ನೀಡಿದ್ದಾರೆ.
ಭಾರತೀಯ ಸೇನೆಯಲ್ಲಿ ನಾಯಕ್ ಆಗಿದ್ದ ಮತ್ತು ಈಗ ವೆಟರನ್ಸ್ ಅಸೋಸಿಯೇಶನ್ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯದರ್ಶಿಯಾಗಿರುವ ಅನುರಾಗ್ ಲಾಥ್ವಾಲ್ ಮಾತನಾಡಿ, ರೈತರ ಎಲ್ಲಾ ಬೇಡಿಕೆಗಳು ಸರಿಯಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್ ಹಾಗೂ ರೈಲ್ವೆ ವಲಯಗಳನ್ನು ಕೈಗಾರಿಕೋದ್ಯಮಿಗಳಿಗೆ ಹಸ್ತಾಂತರ ಮಾಡಿದಂತೆ, ಕೃಷಿ ಕ್ಷೇತ್ರವನ್ನೂ ಹಸ್ತಾಂತರ ಮಾಡಲು ಯತ್ನಿಸುತ್ತಿದೆ ಎಂದು ಅನುರಾಗ್ ಲಾಥ್ವಾಲ್ ಆರೋಪಿಸಿದ್ದಾರೆ.
ವೆಟರನ್ಸ್ ಅಸೋಸಿಯೇಶನ್‌ನ ರಾಷ್ಟ್ರೀಯ ಅಧ್ಯಕ್ಷರಾದ ಸೈನ್ಯದಲ್ಲಿ ಸುಬೇದಾರ್ ಆಗಿದ್ದ ಜೈ ಪ್ರಕಾಶ್ ಮಿಶ್ರಾ ಮೊದಲಿನಿಂದಲೂ ರೈತರಿಗೆ ಬೆಂಬಲ ನೀಡುತ್ತಿದ್ದು, ಆ ಬೆಂಬಲವನ್ನು ಮುಂದುವರೆಸುವುದಾಗಿ ಸ್ಪಷ್ಟನೆ ನೀಡಿದ್ದಾರೆ.