ನವದೆಹಲಿ:ಸರ್ಕಾರದ ಅಂಕಿ - ಅಂಶಗಳ ಪ್ರಕಾರ, ಮಳೆಯಿಂದಾಗಿ ಬೆಳೆ ಹಾನಿ ಹಿನ್ನೆಲೆ ಮಂಡಿಗಳಿಗೆ ಟೊಮೇಟೊ ಪೂರೈಕೆ ಕುಂಠಿತವಾಗಿದೆ. ಹೀಗಾಗಿ ಸೋಮವಾರ ಮೆಟ್ರೋ ಸಿಟಿಗಳಲ್ಲಿ ಟೊಮೇಟೊ ರೀಟೆಲ್ ಬೆಲೆ ರೂ. 93ಕ್ಕೆ ಏರಿಕೆಯಾಗಿದೆ. ಮೆಟ್ರೋ ನಗರಗಳ ಪೈಕಿ, ಕೋಲ್ಕತ್ತಾದಲ್ಲಿ ಟೊಮೇಟೊ ಕೆಜಿಗೆ 93 ರೂ, ಚೆನ್ನೈನಲ್ಲಿ ರೂ. 60, ದೆಹಲಿಯಲ್ಲಿ ಕೆಜಿಗೆ 59ಗೆ ಮಾರಾಟ ಮಾಡಲಾಗಿದೆ.
ಅಕಾಲಿಕ ಮಳೆಯಿಂದಾಗಿ ಟೊಮೇಟೊವನ್ನು ಪ್ರಮುಖ ಬೆಳೆಯಾಗಿ ಬೆಳೆಯುತ್ತಿರುವ ರಾಜ್ಯಗಳಲ್ಲಿ ಬೆಳೆ ಹಾನಿಯುಂಟಾಗಿ ಕಳಪೆ ಗುಣಮಟ್ಟದ ಬೆಳೆ ಪೂರೈಕೆಯಾಗುತ್ತಿರುವುದರಿಂದ ಟೊಮೇಟೊ ಬೆಲೆ ಏರಿಕೆ ಕಂಡಿದೆ.
ಮುಂಬೈನಲ್ಲಿ ಒಂದು ವಾರದ ಹಿಂದೆ 290 ಟನ್‌ಗಳಿದ್ದ ಟೊಮೇಟೊ ಪೂರೈಕೆ ಅಕ್ಟೋಬರ್ 16 ರಂದು 241 ಟನ್‌ಗಳಿಗೆ ಇಳಿದಿದೆ. ದೆಹಲಿಗೆ 528.9 ಟನ್ ಮತ್ತು ಕೋಲ್ಕತ್ತಾಗೆ 545 ಟನ್ ನಷ್ಟು ಟೊಮೇಟೊ ಆಗಮಿಸಿದೆ ಎಂದು ಸರ್ಕಾರ ಮೂರು ಮೆಟ್ರೋ ನಗರಗಳ ಡೇಟಾ ನೀಡಿದೆ.
"ಮಳೆಯಿಂದಾಗಿ ನಾವು ಮಂಡಿಗಳಲ್ಲಿ ಉತ್ತಮ ಗುಣಮಟ್ಟದ ಟೊಮೇಟೊ ಪಡೆಯುತ್ತಿಲ್ಲ. ಗ್ರಾಹಕರು ಒಳ್ಳೆಯದನ್ನು ಆಯ್ಕೆ ಮಾಡುತ್ತಾರೆ ಮತ್ತು ಕೊಳೆತ ಹಣ್ಣುಗಳು ಹಾಗೆ ಉಳಿದಿರುವುದು ನಮಗೆ ನಷ್ಟ ತಂದಿದೆ.''ಆ ನಷ್ಟವನ್ನು ಭರಿಸಲು ನಾವು ಪ್ರಸ್ತುತ ದರಗಳನ್ನು ಮುಂದುವರಿಸಲಿದ್ದೇವೆ "ಎಂದು ದೆಹಲಿಯ ಕರೋಲ್ ಬಾಗ್ ಕಾಲೋನಿಯಲ್ಲಿ ಮಾರಾಟ ಮಾಡುವ ತರಕಾರಿ ವ್ಯಾಪಾರಿ ಶಿವ ಲಾಲ್ ಯಾದವ್ ಹೇಳಿದರು.
ಪ್ರಸ್ತುತ, ಆಂಧ್ರಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ತಮಿಳುನಾಡಿನ ಪ್ರಮುಖ ಬೆಳೆಯುತ್ತಿರುವ ರಾಜ್ಯಗಳಲ್ಲಿ ಟೊಮೇಟೊ ಕಟಾವು ನಡೆಯುತ್ತಿದೆ. ಅಜಾದ್‌ಪುರ್ ಟೊಮೇಟೊ ಅಸೋಸಿಯೇಶನ್ ಅಧ್ಯಕ್ಷ ಅಶೋಕ್ ಕೌಶಿಕ್ ಮಾತನಾಡಿ ಕಳೆದ ವಾರ, "ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿಗೊಳಗಾಯಿತು, ಇದರಿಂದಾಗಿ ದೆಹಲಿಯಂತಹ ಮಾರುಕಟ್ಟೆಗಳ ಪೂರೈಕೆಯ ಮೇಲೆ ಪರಿಣಾಮ ಬೀರಿದೆ.ಇದು ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳಲ್ಲಿ ಬೆಲೆ ಏರಿಕೆಗೆ ಕಾರಣವಾಗಿದೆ ಎಂದಿದ್ದಾರೆ.
ನ್ಯಾಷನಲ್ ಹಾರ್ಟಿಕಲ್ಚರಲ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಫೌಂಡೇಶನ್ ಪ್ರಕಾರ, ಚೀನಾದ ನಂತರ ವಿಶ್ವದ ಎರಡನೇ ಅತಿದೊಡ್ಡ ಟೊಮೇಟೊ ಉತ್ಪಾದಕ ದೇಶವಾಗಿರುವ ಭಾರತವು 7.89 ಲಕ್ಷ ಹೆಕ್ಟೇರ್ ಪ್ರದೇಶದಿಂದ ಸುಮಾರು 19.75 ಮಿಲಿಯನ್ ಟನ್ ಉತ್ಪಾದಿಸುತ್ತದೆ.