ನವದೆಹಲಿ:ತೀವ್ರ ಕುತೂಹಲ ಮೂಡಿಸಿರುವ ಪಂಚ ರಾಜ್ಯಗಳ ವಿಧಾನಸಭೆಗಳು ಸೇರಿ 14 ರಾಜ್ಯಗಳಲ್ಲಿ ನಡೆದ ಉಪಚುನಾವಣೆಯ ಮತ ಎಣಿಕೆ ಕಾರ್ಯ ಬೆಳಗ್ಗೆ 8 ಗಂಟೆಯಿಂದ ಶುರುವಾಗಲಿದೆ.
ಕರ್ನಾಟಕ, ಆಂಧ್ರಪ್ರದೇಶ, ತ್ರಿಪುರ, ಮಧ್ಯಪ್ರದೇಶ, ತೆಲಂಗಾಣ, ರಾಜಸ್ಥಾನ, ಗುಜರಾತ್, ಜಾರ್ಖಂಡ್, ಮಹಾರಾಷ್ಟ್ರ, ಮಿಜೋರಾಂ, ನಾಗಾಲ್ಯಾಂಡ್, ಒಡಿಶಾ ಮತ್ತು ಉತ್ತರಾಖಂಡ್ನಲ್ಲಿ ಬೈಎಲೆಕ್ಷನ್ ನಡೆದಿದ್ದವು.
ಕರ್ನಾಟಕದಲ್ಲಿ 'ಮಿನಿ ಸಮರ' ಗೆಲ್ಲೋರು ಯಾರು?
ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ಕೊರೊನಾ ಸೋಂಕಿನಿಂದ ಅಕಾಲಿಕ ಮೃತಪಟ್ಟಿದ್ದು, ಅವರು ಪ್ರತಿನಿಧಿಸಿದ್ದ ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಜಿದ್ದಾಜಿದ್ದಿಯ ಹಣಾಹಣಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಸಾಕ್ಷಿಯಾಗಿದೆ. ಬಿಜೆಪಿಯ ಮಂಗಲಾ ಸುರೇಶ ಅಂಗಡಿ ಮತ್ತು ಕಾಂಗ್ರೆಸ್‌ನಿಂದ ಸತೀಶ ಜಾರಕಿಹೊಳಿ ಸ್ಪರ್ಧಿಸಿದ್ದಾರೆ.
ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಶಾಸಕ ನಾರಾಯಣರಾವ್ ಸೋಂಕಿಗೆ ಬಲಿಯಾಗಿದ್ದರಿಂದ ಬೈಎಲೆಕ್ಷನ್ ನಡೆದಿತ್ತು. ಕ್ಷೇತ್ರದಲ್ಲಿ ಬಿಜೆಪಿಯಿಂದ ಶರಣು ಸಲಗರ, ಕಾಂಗ್ರೆಸ್‌ನಿಂದ ಮಾಲಾ ಬಿ.ನಾರಾಯಣರಾವ್, ಜೆಡಿಎಸ್‌ನಿಂದ ಸೈಯದ್ ಯಸ್ರಬ್ ಅಲಿಖಾದ್ರಿ, ಪಕ್ಷೇತರರಾಗಿ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಸೇರಿದಂತೆ 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ರಾಯಚೂರಿನ ಮಸ್ಕಿ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯಿಂದ ಪ್ರತಾಪಗೌಡ ಪಾಟೀಲ ಹಾಗೂ ಕಾಂಗ್ರೆಸ್‌ನಿಂದ ಬಸನಗೌಡ ತುರ್ವಿಹಾಳ ಸೇರಿ ಒಟ್ಟು 8 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಆಂಧ್ರದ ಬೈ ಎಲೆಕ್ಷನ್ ಚಿತ್ರಣ
ನೆರೆಯ ಆಂಧ್ರಪ್ರದೇಶದಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ಕೋವಿಡ್‌ನಿಂದ ವೈಎಸ್‌ಆರ್ ಕಾಂಗ್ರೆಸ್ ಎಂ, ಬಲ್ಲಿ ದುರ್ಗಪ್ರಸಾದ ರಾವ್ ಅವರ ಮರಣದ ನಂತರ ತಿರುಪತಿ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಮುಖ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಕೆ. ರತ್ನಪ್ರಭಾ ಅವರು ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಪನಬಕ ಲಕ್ಷ್ಮಿ ಅವರು ಎನ್. ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷದಿಂದ (ಟಿಡಿಪಿ) ಸ್ಪರ್ಧಿಸಿದ್ದಾರೆ.
ಮಧ್ಯಪ್ರದೇಶ
ಏಪ್ರಿಲ್ 17ರಂದು ಮಧ್ಯಪ್ರದೇಶದ ದಾಮೋ ವಿಧಾನಸಭಾ ಸ್ಥಾನಕ್ಕೆ ಉಪಚುನಾವಣೆ ನಡೆಯಿತು. ರಾಜ್ಯದ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷಗಳ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. 22 ಅಭ್ಯರ್ಥಿಗಳ ಪೈಕಿ ಮುಖ್ಯ ಸ್ಪರ್ಧೆ ಬಿಜೆಪಿಯ ರಾಹುಲ್ ಲೋಧಿ ಮತ್ತು ಕಾಂಗ್ರೆಸ್ನ ಅಜಯ್ ಟಂಡನ್ ಇದ್ದಾರೆ. 2018ರಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ದಾಮೋದಿಂದ ಗೆದ್ದ ಲೋಧಿ ಅವರು, ಕಳೆದ ವರ್ಷ ಅಕ್ಟೋಬರ್‌ನಲ್ಲಿ ವಿಧಾನಸಭೆ ಮತ್ತು ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆ ಆಗಿದ್ದರಿಂದ ಅನಿವಾರ್ಯವಾಗಿ ಉಪಚುನಾವಣೆ ನಡೆದಿತ್ತು.