ತಿರುವನಂತಪುರಂ (ಕೇರಳ): ಕೇರಳದಲ್ಲಿ ನಿರಂತರವಾಗಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚುತ್ತಿದೆ. ಪರಿಣಾಮ, ಇಂದಿನಿಂದ ಸೋಂಕಿತ ಪ್ರಕರಣಗಳು ಜಾಸ್ತಿ ಇರುವ ಜಿಲ್ಲೆಗಳಲ್ಲಿ ಸರ್ಕಾರ ಸಂಪೂರ್ಣ ಲಾಕ್‌ಡೌನ್ ಮಾಡುವ ಸಾಧ್ಯತೆಯಿದೆ.
"ಕೋವಿಡ್ ಪ್ರಕರಣಗಳ ಉಲ್ಬಣದಿಂದ ರಾಜ್ಯದ ಪರಿಸ್ಥಿತಿ ಹದಗೆಡುತ್ತಿದೆ. ಈ ಹಿಂದೆ ಘೋಷಿಸಿದ ನಿರ್ಬಂಧಗಳ ಹೊರತಾಗಿ, ಕೊರೊನಾ ಪಾಸಿಟಿವ್ ದರವು ಶೇಕಡಾ 50 ಕ್ಕಿಂತ ಹೆಚ್ಚಿರುವ ಕೆಲವು ಜಿಲ್ಲೆಗಳಲ್ಲಿ ಪೂರ್ಣ ಲಾಕ್‌ಡೌನ್ ವಿಧಿಸಬೇಕಾಗಬಹುದು. ಈ ನಿಟ್ಟಿನಲ್ಲಿ ಮೇ 4 ರಿಂದ ನಾವು ಕಠಿಣ ನಿರ್ಬಂಧಗಳನ್ನು ವಿಧಿಸಲಿದ್ದೇವೆ" ಎಂದು ಪಿಣರಾಯಿ ವಿಜಯನ್ ಶುಕ್ರವಾರ ಹೇಳಿದ್ದಾರೆ.
"ಭಾಗಶಃ ಲಾಕ್‌ಡೌನ್ ಸಮಯದಲ್ಲಿ ಅಗತ್ಯ ಸೇವೆಗಳನ್ನು ಮಾತ್ರ ಅನುಮತಿಸಲಾಗುವುದು. ಬ್ಯಾಂಕ್ಗಳು ಮಧ್ಯಾಹ್ನ 2 ರವರೆಗೆ ಕಾರ್ಯನಿರ್ವಹಿಸುತ್ತವೆ (ಸಾರ್ವಜನಿಕರಿಗೆ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ). ತುರ್ತು ಸೇವೆಗಳನ್ನು ಮಾತ್ರ ನಿರ್ವಹಿಸುವ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತವೆ. ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳು ತೆರೆದಿರುತ್ತವೆ. ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಂದ ಟೇಕ್‌ಅವೇ ಮತ್ತು ಹೋಂ ಡೆಲಿವರಿ ಮಾತ್ರ ಇರಲಿದೆ. ಆದಾಗ್ಯೂ, ಸರಕು ಸಾಗಣೆಗೆ ಮತ್ತು ವಿಮಾನ ಅಥವಾ ರೈಲು ಮೂಲಕ ಪ್ರಯಾಣಿಸುವವರಿಗೆ ಯಾವುದೇ ನಿರ್ಬಂಧಗಳಿಲ್ಲ. ಧಾರ್ಮಿಕ ಸ್ಥಳಗಳಲ್ಲಿ ಕೇವಲ 50 ಜನರಿಗೆ ಮಾತ್ರ ಅನುಮತಿಸಲಾಗುವುದು. ಪಡಿತರ ಅಂಗಡಿಗಳು ಮತ್ತು ನಾಗರಿಕ ಸರಬರಾಜು ಮಳಿಗೆಗಳು ತೆರೆದಿರುತ್ತವೆ" ಎಂದು ತಿಳಿಸಿದ್ದಾರೆ.