ಜಾಮ್‌ನಗರ (ಗುಜರಾತ್): ಜಾಮ್‌ನಗರದ ಸಾಧನಾ ಕಾಲೋನಿ ಬ್ಲಾಕ್ ಸಂಖ್ಯೆ 69 ಪ್ರದೇಶದಲ್ಲಿನ ಮೂರು ಅಂತಸ್ತಿನ ವಸತಿ ಕಟ್ಟಡ ಕುಸಿದು ಮೂವರು ಸಾವನ್ನಪ್ಪಿದ್ದು, ಏಳು ಜನ ಗಾಯಗೊಂಡಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ. 30 ವರ್ಷಗಳಷ್ಟು ಹಳೆಯದಾದ ವಸತಿ ಕಟ್ಟಡ ಇದಾಗಿತ್ತು. ಕಟ್ಟಡದಲ್ಲಿ ಒಟ್ಟು ಆರು ಫ್ಲ್ಯಾಟ್‌ಗಳಿದ್ದವು. ಈ ಪೈಕಿ ಎರಡು ಫ್ಲಾಟ್‌ಗಳಲ್ಲಿ ಕುಟುಂಬಗಳು ವಾಸಿಸುತ್ತಿದ್ದವು. ಏಕಾಏಕಿ ಕಟ್ಟಡದ ಒಂದು ಭಾಗ ಕುಸಿದು ಬಿದ್ದದ್ದರಿಂದ ಒಂದೆ ಕುಟುಂಬದ ಮೂವರು ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದ್ದಾರೆ.
ಇನ್ನು ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಮತ್ತು ಪಾಲಿಕೆ ತಂಡವೂ ರಕ್ಷಣಾ ಕಾರ್ಯಾಚರಣೆ ನಡೆಸಿ, ಅವಶೇಷಗಳಡಿ ಸಿಲುಕಿದ್ದ ಜನರನ್ನು ರಕ್ಷಿಸಿದ್ದಾರೆ. ನಂತರ ಅವರನ್ನು ಚಿಕಿತ್ಸೆಗಾಗಿ ಜಾಮ್‌ನಗರದ ಸಿವಿಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗರ್ಭಿಣಿ ಪತ್ನಿ, ಪತಿ, ಮಗು ಸಾವು :ಘಟನೆಯಲ್ಲಿಒಂದೇ ಕುಟುಂಬದ ಮೂವರ ಸಾವಿಗೀಡಾಗಿದ್ದಾರೆ. ಗರ್ಭಿಣಿ ಪತ್ನಿ, ಪತಿ, ಪುತ್ರ ಸಾವಿನಿಂದ ಇಡೀ ಪ್ರದೇಶದಲ್ಲಿ ಶೋಕ ಮಡುಗಟ್ಟಿದೆ. ಜೈಪಾಲ್ ಸಾದಿಯಾ, ಅವರ ಪತ್ನಿ ಮಿತಾಲ್ಬೆನ್ ಮತ್ತು ಏಳು ವರ್ಷದ ಮಗ ಶಿವರಾಜ್ ದುರ್ಘಟನೆಯಲ್ಲಿ ಸಾವನ್ನಪಿದವರು.
ಪರಿಹಾರ ಘೋಷಣೆ: ಘಟನೆಯ ಬಗ್ಗೆ ಮಾಹಿತಿ ಪಡೆದ ರಾಜ್ಯದ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದರು. ಅಲ್ಲದೇ ಮೃತರ ಕುಟುಂಬಕ್ಕೆ 4 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ಆರ್ಥಿಕ ನೆರವು ಘೋಷಿಸಿದರು. ಘಟನೆಯಲ್ಲಿ ಬದುಕುಳಿದ ಇಬ್ಬರು ಪುತ್ರಿಯರಿಗೆ ಪ್ರಧಾನಿ ಸುಕನ್ಯಾ ಯೋಜನೆಯಡಿ ನೆರವು ನೀಡಲಾಗುವುದು. ಕೂಡಲೇ 51 ಸಾವಿರ ರೂ. ನೆರವು ನೀಡಲು ವ್ಯವಸ್ಥೆ ಮಾಡಲಾಗುವುದಾಗಿ ಸಿಎಂ ತಿಳಿಸಿದ್ದಾರೆ. ಸ್ಥಳೀಯಾ ಶಾಸಕಿ ರಿವಾಬ ಜಡೇಜಾ (ಕ್ರಿಕೆಟರ್ ರವೀಂದ್ರ ಜಡೇಜಾ ಪತ್ನಿ) ಪರಿಹಾರದ ಬಗ್ಗೆ ಮಾಹಿತಿ ನೀಡಿದರು.