ಮುಜಾಫರ್‌ನಗರ:ಉತ್ತರ ಪ್ರದೇಶದಲ್ಲಿ ನಡೆದ ಫ್ಯಾಷನ್ ಶೋನಲ್ಲಿ ಕೆಲವು ಕಾಲೇಜು ವಿದ್ಯಾರ್ಥಿನಿಯರಿಗೆ ಬುರ್ಖಾ ಧರಿಸಿ ರ‍್ಯಾಂಪ್ ವಾಕ್ ಮಾಡಲು ಅವಕಾಶ ನೀಡಿದ್ದಕ್ಕೆ ಮುಸ್ಲಿಂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಮುಜಾಫರ್‌ನಗರ ಜಿಲ್ಲೆಯ ಶ್ರೀರಾಮ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಈ ಫ್ಯಾಷನ್ ಶೋನಲ್ಲಿ ಹಿಂದಿನ ಬಾಲಿವುಡ್ ನಟಿ ಮಂದಾಕಿನಿ ಮತ್ತು ಇತರ ಹಲವು ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯ ದಿನವಾದ ಭಾನುವಾರ ಕೆಲ ವಿದ್ಯಾರ್ಥಿನಿಯರು ಬುರ್ಖಾ ಧರಿಸಿ ರ‍್ಯಾಂಪ್ ವಾಕ್ ಮಾಡಿದ್ದರು. ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಫ್ಯಾಷನ್ ಶೋನಲ್ಲಿ ಕೆಲವು ಕಾಲೇಜು ವಿದ್ಯಾರ್ಥಿನಿರಿಗೆ ಬುರ್ಖಾ ಧರಿಸಿ ರ‍್ಯಾಂಪ್ ವಾಕ್ ಮಾಡಲು ಅವಕಾಶ ನೀಡಿರುವುದನ್ನು ವಿರೋಧಿಸಿ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
''ಬುರ್ಖಾ ಮುಸ್ಲಿಂ ಮಹಿಳೆಯರ ಪರ್ದಾವಾಗಿದ್ದು, ಅದನ್ನು ಫ್ಯಾಷನ್ ಶೋನ ಭಾಗವನ್ನಾಗಿ ಮಾಡಬಾರದು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಪ್ರಯತ್ನ ನಡೆದಿದೆ'' ಎಂದು ಎಂದು ಜಮಿಯತ್- ಎ- ಉಲೇಮಾ ಮುಖಂಡರು ಹೇಳಿದ್ದಾರೆ.
ಜಮಿಯತ್- ಎ- ಉಲೇಮಾದ ಜಿಲ್ಲಾ ಸಂಚಾಲಕ ಮೌಲಾನಾ ಮುಕರಂ ಖಾಸ್ಮಿ ಈ ಕುರಿತು ಮಾತನಾಡಿ, ''ಬುರ್ಖಾವನ್ನು ಧರಿಸಿ ಯಾವುದೇ ಫ್ಯಾಷನ್ ಶೋನಲ್ಲಿ ಭಾಗವಹಿಸಲು ಅನುಮತಿ ನೀಡಬಾರದು. ಧರ್ಮವನ್ನು ಗುರಿಯಾಗಿಸಲು ಈ ರೀತಿ ಮಾಡುವುದು ಸರಿಯಲ್ಲ. ಅಂತಹ ಕ್ರಮವನ್ನು ಜಮಿಯತ್-ಎ-ಉಲೇಮಾ ಖಂಡಿಸುತ್ತದೆ'' ಎಂದಿದ್ದಾರೆ.
''ಈ ಬಗ್ಗೆ ಗಮನಹರಿಸುವಂತೆ ಕಾಲೇಜು ಆಡಳಿತ ಮತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. ಮತ್ತೆ ಯಾರಾದರೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದರೆ, ಅಂತಹ ಕಾರ್ಯಕ್ರಮದ ವಿರುದ್ಧ ತಮ್ಮ ಸಂಘಟನೆ ಕಾನೂನು ಹೋರಾಟ ನಡೆಸಲಿದೆ'' ಎಂದು ಮೌಲಾನಾ ಖಾಸ್ಮಿ ಎಚ್ಚರಿಕೆ ನೀಡಿದ್ದಾರೆ. "ಇದಕ್ಕಾಗಿ ನಾವು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ಗೆ ಹೋಗಲು ಹಿಂಜರಿಯುವುದಿಲ್ಲ. ಬುರ್ಖಾವು ಮುಸ್ಲಿಂ ಮಹಿಳೆಯೊಬ್ಬರು ಮನೆಯಿಂದ ಹೊರಗೆ ಹೋದಾಗಲೆಲ್ಲಾ ಧರಿಸುವ ಬಟ್ಟೆಯಾಗಿದೆ. ಫ್ಯಾಷನ್ ಶೋಗಳಲ್ಲಿ ಬುರ್ಖಾವನ್ನು ಕೆಂಪು ಅಥವಾ ಹಳದಿ ಬಟ್ಟೆಯಲ್ಲಿ ಹೊಲಿಯುವುದು ಸಂಪೂರ್ಣವಾಗಿ ತಪ್ಪು" ಎಂದು ಅವರು ಪ್ರತಿಪಾದಿಸಿದ್ದಾರೆ.
''ಕಾಲೇಜು ಶಿಕ್ಷಕರು ಅದನ್ನು ಸೃಜನಾತ್ಮಕವಾಗಿ ಧರಿಸುವಂತೆ ಕೇಳಿಕೊಂಡಿದ್ದರು. ಬಹುವರ್ಣದ ಬುರ್ಖಾ ಧರಿಸುವುದರಿಂದ ಸೃಜನಾತ್ಮಕತೆ ಹೆಚ್ಚುತ್ತದೆ ಎಂದು ಭಾವಿಸಿದ್ದೇನೆ. ನಾವು ಈ ಬಾರಿ ವಿವಿಧ ಬಣ್ಣಗಳ ಬುರ್ಖಾವನ್ನು ಧರಿಸಲು ಬಯಸಿದ್ದೇವೆ. ಈ ಆಲೋಚನೆಯೊಂದಿಗೆ ನಾವು ಫ್ಯಾಷನ್ ಶೋನಲ್ಲಿ ಬುರ್ಖಾವನ್ನು ವಿಭಿನ್ನ ರೀತಿಯಲ್ಲಿ ಧರಿಸಲು ಯೋಚಿಸಿದ್ದೆವು" ಎಂದು ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ:ಗಾಂಧಿ ಮಹಾಪುರುಷ, ಮೋದಿ ಯುಗಪುರುಷ: ಉಪರಾಷ್ಟ್ರಪತಿ ಧನಕರ್ ಬಣ್ಣನೆ, ಪ್ರತಿಪಕ್ಷಗಳ ಟೀಕೆ