ಉತ್ತರಕಾಶಿ:ಉತ್ತರಾಖಂಡದ ಉತ್ತರಕಾಶಿಯ ದ್ರೌಪತಿಯ ದಂಡ 2 ಪರ್ವತ ಶಿಖರದ ಬಳಿ ಮಂಗಳವಾರ ಹಿಮಪಾತ ಸಂಭವಿಸತ್ತು. ಇದರಲ್ಲಿ 44 ಪರ್ವತಾರೋಹಿಗಳು ಸಿಲುಕಿದ್ದು, 14 ಮಂದಿಯನ್ನು ರಕ್ಷಿಸಲಾಗಿದೆ. ನಾಪತ್ತೆಯಾಗಿರುವ 20 ಪರ್ವತಾರೋಹಿಗಳ ರಕ್ಷಣಾ ಕಾರ್ಯ ಎಸ್‌ಡಿಆರ್‌ಎಫ್ ಮತ್ತು ಐಟಿಬಿಪಿ ತಂಡದಿಂದ ನಡೆಯುತ್ತಿದೆ. ಇಲ್ಲಿಯತನಕ 10 ಮೃತದೇಹಗಳು ಪತ್ತೆಯಾಗಿವೆ.
SDRF, ITBP ಮತ್ತು NIM ತಂಡಗಳಿಂದ ವಾಯುಪಡೆಯ ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯ ನಡೆಯುತ್ತಿದೆ. ಬುಧವಾರ 6 ಮೃತದೇಹಗಳು ಪತ್ತೆಯಾಗಿವೆ. ಇದುವರೆಗೆ ಒಟ್ಟು 10 ಮೃತದೇಹಗಳನ್ನ ಹೊರ ತೆಗೆಯಲಾಗಿದೆ. ಸುಮಾರು 20 ಮಂದಿ ನಾಪತ್ತೆಯಾಗಿದ್ದಾರೆ. ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಡಿಜಿಪಿ ಅಶೋಕ್ ಕುಮಾರ್ ಹೇಳಿದ್ದಾರೆ.
ಪರಿಹಾರ ಘೋಷಿಸಿದ ಸರ್ಕಾರ: ಪೌರಿ ಗರ್ವಾಲ್ ಬಸ್ ಅಪಘಾತ ಮತ್ತು ಉತ್ತರಕಾಶಿ ಹಿಮ ಕುಸಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಉತ್ತರಾಖಂಡ ಸರ್ಕಾರ ತಲಾ ಎರಡು ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಿದೆ. ಗಂಭೀರವಾಗಿ ಗಾಯಗೊಂಡವರಿಗೆ ತಲಾ 1 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಲಾಗಿದೆ.