ಉತ್ತರಕಾಶಿ (ಉತ್ತರಾಖಂಡ): ಉತ್ತರಾಖಂಡದ ಗಡಿ ಜಿಲ್ಲೆ ಉತ್ತರಕಾಶಿಯಲ್ಲಿ ಹಿಮಪಾತ ದುರಂತಕ್ಕೆ ಸಂಬಂಧಿಸಿದಂತೆ ಕಳೆದ ನಾಲ್ಕು ದಿನಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇಲ್ಲಿಯವರೆಗೆ ಒಟ್ಟಾರೆ 26 ಜನ ಪರ್ವತಾರೋಹಿಗಳ ಮೃತದೇಹಗಳು ಪತ್ತೆಯಾಗಿವೆ. ಇನ್ನೂ ಉಳಿದವರಿಗಾಗಿ ರಕ್ಷಣಾ ಕಾರ್ಯ ನಡೆಯುತ್ತಿದೆ.
ಉತ್ತರಕಾಶಿ ಜಿಲ್ಲೆಯ ದ್ರೌಪದಿಯ ದಂಡ-2 ಪ್ರದೇಶಕ್ಕೆ ಅಕ್ಟೋಬರ್ 4ರಂದು ನೆಹರೂ ಪರ್ವತಾರೋಹಣ ಸಂಸ್ಥೆಯ 40 ಜನ ಪರ್ವತಾರೋಹಿಗಳ ತಂಡ ತೆರಳಿತ್ತು. ಈ ವೇಳೆ, ಹಿಮಕುಸಿತ ಉಂಟಾಗಿ ಪರ್ವತಾರೋಹಿಗಳು ಸಿಲುಕಿದ್ದರು. ಮೊದಲ ದಿನವೇ 10 ಜನರ ಮೃತಪಟ್ಟಿದ್ದರು. ಆದರೆ, ಪ್ರತಿಕೂಲ ಹವಾಮಾನ ಹಾಗೂ ಹಿಮಪಾತದ ಬಿರುಕುಗಳಲ್ಲಿ ಪರ್ವತಾರೋಹಿಗಳು ಸಿಲುಕಿರುವ ಕಾರಣ ರಕ್ಷಣಾ ಕಾರ್ಯಕ್ಕೆ ತೊಂದರೆ ಉಂಟಾಗಿದೆ.
ಗುರುವಾರದವರೆಗೆ ಒಟ್ಟು 16 ಶವಗಳನ್ನು ಹೊರತೆಗೆಯಲಾಗಿತ್ತು. ಇದರಲ್ಲಿ ಇಬ್ಬರು ತರಬೇತುದಾರರು ಮತ್ತು 14 ಪ್ರಶಿಕ್ಷಣಾರ್ಥಿಗಳು ಸೇರಿದ್ದರು. ಇಂದು ಶುಕ್ರವಾರ ಇನ್ನೂ 7 ಪರ್ವತಾರೋಹಿಗಳ ಮೃತದೇಹಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟಾರೆ ಒಟ್ಟಾರೆ ಸಾವಿನ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.