ರಾಂಚಿ:ಕುಟುಂಬಸ್ಥರ ವಿರೋಧದ ನಡುವೆಯೂ ಪ್ರಿಯಕರನೊಂದಿಗೆ ಬಾಳಲು ಇಚ್ಚಿಸಿದ ಯುವತಿಗೆ ಜಾರ್ಖಂಡ್ ಹೈಕೋರ್ಟ್ ಅಸ್ತು ಎಂದಿದೆ. ಆಕೆ ಪ್ರೀತಿಸುತ್ತಿರುವ ಯುವಕನೊಂದಿಗೆ ಬದುಕುವ ಹಕ್ಕಿದೆ ಎಂದು ಹೇಳಿದೆ.
ಜಾರ್ಖಂಡ್ನ ಯುವಕನೊಬ್ಬ ತನ್ನಿಂದ ಪ್ರಿಯತಮೆಯನ್ನು ಆಕೆಯ ಕುಟುಂಬಸ್ಥರು ದೂರ ಮಾಡಿದ್ದಾರೆ. ಆಕೆಯನ್ನು ನನ್ನೊಂದಿಗೆ ಬದುಕಲು ಬಿಡಿ ಎಂದು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಕೋರ್ಟ್, ವಯಸ್ಕ ಯುವತಿ ತನ್ನ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕಿದೆ. ಹೀಗಾಗಿ ಆಕೆ ತನ್ನ ಪ್ರಿಯಕರನೊಂದಿಗೆ ಜೀವಿಸಲು ಅನುವು ಮಾಡಿಕೊಡಬೇಕು ಎಂದು ಆದೇಶಿಸಿದೆ.
ಕುಟುಂಬಸ್ಥರ ವಿರೋಧದಿಂದ ಬಹಳ ದಿನಗಳಿಂದ ದೂರ ಇದ್ದ ಪ್ರೇಮಿಗಳು ಕೋರ್ಟ್ನ ಮಧ್ಯಸ್ಥಿಕೆಯಲ್ಲಿ ಭೇಟಿಯಾಗಿದ್ದಲ್ಲದೇ, ಒಟ್ಟಿಗೆ ಬಾಳಲು ಅವಕಾಶ ಪಡೆದರು. ಇಬ್ಬರಿಗೂ ಭದ್ರತೆ ಒದಗಿಸುವಂತೆ ಸ್ಥಳೀಯ ಪೊಲೀಸ್ ಠಾಣೆಗೆ ನ್ಯಾಯಾಲಯ ಸೂಚಿಸಿದೆ.