ಅಯೋಧ್ಯೆ (ಉತ್ತರ ಪ್ರದೇಶ): 2024ರ ಜನವರಿ 22ರಂದು ರಾಮಮಂದಿರದಲ್ಲಿ ನಡೆಯಲಿರುವ ಶ್ರೀರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಬಿಜೆಪಿ ಹಿರಿಯ ನಾಯಕರಾದ ಎಲ್ ಕೆ ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಅವರು ಗೈರಾಗುವ ಸಾಧ್ಯತೆ ಇದೆ.
ಇಬ್ಬರೂ ಹಿರಿಯರಾಗಿದ್ದು ಆರೋಗ್ಯ ಮತ್ತು ವಯಸ್ಸಿನ ದೃಷ್ಟಿಯಿಂದ ಶ್ರೀರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ಮನವಿ ಮಾಡಿದ್ದು, ಈ ವಿನಂತಿಗೆ ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಅವರು ಒಪ್ಪಿಗೆ ನೀಡಿದ್ದಾರೆ ಎಂದು ರಾಮ ಮಂದಿರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಸೋಮವಾರ ಮಾಧ್ಯಮದವರಿಗೆ ತಿಳಿಸಿದ್ದಾರೆ. ಹೀಗಾಗಿ ಅವರಿಬ್ಬರು ಭಾಗವಹಿಸವ ಸಾಧ್ಯತೆ ಕಮ್ಮಿ.
ಜನವರಿಯ 22 ರಂದು ನಡೆಯಲಿರುವ ಪ್ರಾಣ ಪ್ರತಿಷ್ಠಾಪನೆ, ಮಹಾಮಸ್ತಕಾಭಿಷೇಕ ಸಮಾರಂಭಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರು ಮುಖ್ಯ ಅಥಿತಿಯಾಗಿ ಪಾಲ್ಗೊಳ್ಳಲಿದ್ದಾರೆ. ಜನವರಿ 15ರ ಒಳಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಳ್ಳಲಿವೆ. ಹಾಗೇ ಜನವರಿ 16 ರಿಂದ ಜನವರಿ 22ರ ವರೆಗೆ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಪೂಜೆಗಳು ನಡೆಯಲಿವೆ ಎಂದು ಚಂಪತ್ ರೈ ಮಾಹಿತಿ ನೀಡಿದ್ದಾರೆ. ಈ ವೇಳೆ ಆಹ್ವಾನಿತರ ಪಟ್ಟಿ ನೀಡಿದ ಅವರು ಆರೋಗ್ಯ ಮತ್ತು ವಯೋಸಹಜ ಕಾರಣಗಳಿಂದಾಗಿ ಎಲ್ ಕೆ ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಮಹಾಮಸ್ತಕಾಭಿಷೇಕ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿಸಿದರು. ಹಿರಿಯರಾದ ಅಡ್ವಾಣಿ ಅವರಿಗೆ ಪ್ರಸ್ತುತ 96 ವರ್ಷ ವಯಸ್ಸಾಗಿದೆ ಮತ್ತು ಮುಂದಿನ ತಿಂಗಳು ಮುರಳಿ ಜೋಶಿ ಅವರಿಗೆ 90 ವರ್ಷ ತುಂಬಲಿದೆ.
ಗಣ್ಯರ ವಿವರ ಹೀಗಿದೆ: ಜೆಡಿಎಸ್ ಹಿರಿಯ ನಾಯಕರಾದ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿ ಸಮಾರಂಭಕ್ಕೆ ಆಹ್ವಾನಿಸಲು ಮೂವರ ಸದಸ್ಯರ ತಂಡ ರಚಿಸಲಾಗಿದೆ ಎಂದು ರೈ ಹೇಳಿದ್ದಾರೆ. ಮುಂದುವರೆದು 6 ಪ್ರಾಚೀನ ಮಠಗಳ ಶಂಕರಾಚಾರ್ಯರು ಮತ್ತು ಸುಮಾರು 150 ಸಂತರು ಮತ್ತು ಋಷಿಮುನಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಒಟ್ಟು ಈ ಐತಿಹಾಸಿಕ ಶುಭ ಕಾರ್ಯಕ್ಕೆ 4,000 ಸಂತರು ಮತ್ತು 2,200 ಇತರ ಅತಿಥಿಗಳನ್ನು ಆಹ್ವಾನಿಸಲಾಗಿದೆ. ಅಲ್ಲದೆ ಉತ್ತರಪ್ರದೇಶದ ಕಾಶಿ ವಿಶ್ವನಾಥ ಮತ್ತು ವೈಷ್ಣೋದೇವಿ ದೇವಾಲಯಗಳ ಮುಖ್ಯಸ್ಥರು ಮತ್ತು ಧಾರ್ಮಿಕ ಮತ್ತು ಸಾಂವಿಧಾನಿಕ ಸಂಸ್ಥೆಗಳ ಪ್ರತಿನಿಧಿಗಳನ್ನು ಸಹ ಆಹ್ವಾನಿಸಲಾಗಿದೆ ಎಂದು ರೈ ತಿಳಿಸಿದ್ದಾರೆ.