ಲಖನೌ (ಉತ್ತರ ಪ್ರದೇಶ): ದೇಶವು ಜನವರಿ 26ರಂದು 74ನೇ ಗಣರಾಜ್ಯೋತ್ಸವ ಆಚರಿಸಲು ಸಜ್ಜಾಗಿದೆ. ಮತ್ತೊಂದೆಡೆ ಉತ್ತರ ಪ್ರದೇಶದಲ್ಲಿ ಕೊಳೆಗೇರಿಗಳಲ್ಲಿ ವಾಸಿಸುವ 40ಕ್ಕೂ ಹೆಚ್ಚು ಮಕ್ಕಳು ಗಣತಂತ್ರದ ಪರೇಡ್‌ನಲ್ಲಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆ ಮತ್ತು ದೇಶ ಪ್ರೇಮವನ್ನು ಪ್ರದರ್ಶಿಸಲು ಜೀವಮಾನದಲ್ಲಿ ಮೊದಲ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
ಹೌದು, ಕೊಳೆಗೇರಿ ನಿವಾಸಿಗಳ ಮಕ್ಕಳು ಮತ್ತು ಅದರಲ್ಲೂ ಟ್ರಾಫಿಕ್ ಸಿಗ್ನಲ್ ಭಿಕ್ಷೆ ಬೇಡುತ್ತಿದ್ದ 11ರಿಂದ 18ರ ವಯಸ್ಸಿನ ಮಕ್ಕಳು ಗುರುವಾರ ನಡೆಯುವ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಿಕ್ಷಾಟನೆಯಿಂದ ಶಿಕ್ಷಣದತ್ತ (Bhiksha Se Shiksha Ki Ore) ಎಂಬ ಘೋಷಣಾ ಫಲಕಗಳನ್ನು ಹಿಡಿದು ಪಾಲ್ಗೊಳ್ಳಲಿದ್ದಾರೆ. ಈ ಮೂಲಕ ಶಿಕ್ಷಣದ ಮಹತ್ವವನ್ನು ಈ ಸ್ಲಂ ನಿವಾಸಿಗಳ ಮಕ್ಕಳು ಸಾರಲಿದ್ದಾರೆ.
ಇದೇ ಮೊದಲ ಅವಕಾಶ: ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದ ಮಕ್ಕಳನ್ನು ಮುಖ್ಯ ವಾಹಿನಿಗೆ ತಂದು, ಅವರನ್ನು ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾಗವಹಿಸಲು ಅವಕಾಶ ನೀಡುತ್ತಿರುವುದು ದೇಶದಲ್ಲಿ ಇದೇ ಮೊದಲು. ಯಾವುದೇ ಕೊಳೆಗೇರಿ ಪ್ರದೇಶಗಳ ಭಿಕ್ಷುಕ ಮಕ್ಕಳು ಈ ಹಿಂದೆ ಇಂತಹ ರಾಷ್ಟ್ರೀಯ ದಿನಾಚರಣೆಯ ಪರೇಡ್‌ನಲ್ಲಿ ಪಾಲ್ಗೊಂಡಿಲ್ಲ ಎನ್ನುತ್ತಾರೆ ಉತ್ತರ ಪ್ರದೇಶದ ಲಖನೌ ಪಾಲಿಕೆ ಆಯುಕ್ತ ಇಂದರ್ಜೀತ್ ಸಿಂಗ್.
ಸ್ಲಂ ನಿವಾಸಿಗಳ ಮಕ್ಕಳನ್ನು ಭಿಕ್ಷಾಟನೆಯಿಂದ ಹೊರತರುವ ಮತ್ತು ಅವರನ್ನು ಮುಖ್ಯವಾಹಿನಿಯೊಂದಿಗೆ ಸಂಪರ್ಕಿಸುವ ಉದ್ದೇಶದಿಂದ 'ಸ್ಮೈಲ್' ಎಂಬ ಯೋಜನೆ ರೂಪಿಸಲಾಗಿದೆ. ಈ 'ಸ್ಮೈಲ್' ಎಂಬ ಯೋಜನೆ ಭಾಗವಾಗಿ ಟ್ರಾಫಿಕ್ ಸಿಗ್ನಲ್, ಕ್ರಾಸ್ ರೋಡ್‌ನಲ್ಲಿ ಭಿಕ್ಷೆ ಬೇಡುತ್ತಿದ್ದ 40ಕ್ಕೂ ಹೆಚ್ಚು ಮಕ್ಕಳನ್ನು ಶಾಲೆಗೆ ಸೇರಿ, ಅವರನ್ನು ಪ್ರತಿದಿನ ವಿದ್ಯಾಭ್ಯಾಸದಲ್ಲಿ ತೊಡಗಿಸುವಂತೆ ಮಾಡುತ್ತಿದ್ದೇವೆ. ಕಳೆದ ಒಂದೂವರೆ ವರ್ಷದಿಂದ ಈ ಕಾರ್ಯ ಮಾಡುತ್ತಿದ್ದೇವೆ. ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಇಂತಹ ಮಕ್ಕಳು ಪಾಲ್ಗೊಳ್ಳುವುದರಿಂದ ಅವರಿಗೆ ಹೊಸ ಅನುಭವ ಮತ್ತು ಆತ್ಮವಿಶ್ವಾಸ ಸಿಗುತ್ತದೆ ಎಂದು ಪಾಲಿಕೆ ಆಯುಕ್ತರು ಹೇಳಿದರು.
'ಸ್ಮೈಲ್' ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಉಮೀದ್ ಎಂಬ ಎನ್‌ಜಿಒ ಪ್ರಮುಖ ಬಲ್ಬೀರ್ ಸಿಂಗ್ ಮಾನ್ ಮಾತನಾಡಿ, ಮೊದಲು ಈ ಬಡ ಮಕ್ಕಳು ಹಣಕ್ಕಾಗಿ ಭಿಕ್ಷೆ ಬೇಡುತ್ತಿದ್ದರು. ಇಂತಹ ಮಕ್ಕಳು ನಾವು ರಕ್ಷಿಸಿ, ಕಳೆದ ಒಂದೂವರೆ ವರ್ಷದಿಂದ ಅವರಿಗೆ ಶಿಕ್ಷಣ ನೀಡುತ್ತಿದ್ದೇವೆ. ಇಂದು ಶಿಕ್ಷಣವು ಈ ಮಕ್ಕಳಲ್ಲಿ ಸಾಕಷ್ಟು ಆತ್ಮವಿಶ್ವಾಸವನ್ನೂ ತುಂಬಿದೆ ಎಂದು ತಿಳಿಸಿದರು.
ಮತ್ತೊಬ್ಬ ಪ್ರಮುಖ ಪ್ರತಾಪ್ ವಿಕ್ರಮ್ ಸಿಂಗ್, ಒಂದೂವರೆ ವರ್ಷದ ಹಿಂದೆ ಈ ಮಕ್ಕಳು ನಮ್ಮನ್ನು ನಂಬಲು ಸಿದ್ಧರಿಲಿಲ್ಲ ಮತ್ತು ಯಾರೊಂದಿಗೂ ಮಾತನಾಡಲು ಅವರು ಬಯಸುತ್ತಿರಲಿಲ್ಲ. ಇಂತಹ ಮಕ್ಕಳ ವಿಶ್ವಾಸ ಗಳಿಸುವಲ್ಲಿ ನಮಗೆ ತುಂಬಾ ಸಮಯ ಹಿಡಿಯಿತು. ಈಗ ಸ್ಮಾರ್ಟ್ ತರಗತಿಗಳನ್ನು ನಡೆಸಲು ಪ್ರಾರಂಭಿಸಿದ್ದೇವೆ. ಅಲ್ಲದೇ, ಗಣರಾಜ್ಯೋತ್ಸವದ ಪರೇಡ್‌ಗಾಗಿ ಈ ಮಕ್ಕಳು ಅಭ್ಯಾಸ ಮಾಡಿದ್ದಾರೆ. ಕಾನ್ವೆಂಟ್‌ಗಳು ಮತ್ತು ಇತರ ಸರ್ಕಾರಿ ಶಾಲೆಗಳ ಮಕ್ಕಳಿಗೆ ಸರಿಸಮಾನವಾಗಿ ಈ ಮಕ್ಕಳು ಪ್ರದರ್ಶನ ನೀಡುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಇದನ್ನೂ ಓದಿ:ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕೇವಲ ಮೇಡ್ ಇನ್ ಇಂಡಿಯಾ ಶಸ್ತ್ರಾಸ್ತ್ರಗಳ ಮೂಲಕ ಸೇನಾ ಶಕ್ತಿ ಪ್ರದರ್ಶನ