ಕರ್ನಾಟಕ

karnataka

ETV Bharat / bharat

ಗಣರಾಜ್ಯೋತ್ಸವಕ್ಕೆ ದೆಹಲಿಯಲ್ಲಿ ಸಿದ್ಧತೆ: ಸಾರ್ವಜನಿಕರ ಆಸನ ಸಂಖ್ಯೆ ಕಡಿತ, ಪರೇಡ್‌ನಲ್ಲಿ ಈಜಿಪ್ಟ್‌ ಸೇನೆಗೂ ಅವಕಾಶ - ಈಟಿವಿ ಭಾರತ ಕನ್ನಡ

ದೇಶಾದ್ಯಂತ ಜನವರಿ 26ರಂದು ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದೆಹಲಿಯಲ್ಲಿ ಸಕಲ ರೀತಿಯ ತಯಾರಿಗಳು ನಡೆಯುತ್ತಿವೆ.

Republic Day 2023
ಗಣರಾಜ್ಯೋತ್ಸವ 2023

By

Published : Jan 22, 2023, 10:48 AM IST

ನವದೆಹಲಿ: 74ನೇ ವರ್ಷದ ಗಣರಾಜ್ಯೋತ್ಸವ ಆಚರಣೆಗೆ ರಾಷ್ಟ್ರ ರಾಜಧಾನಿಯಲ್ಲಿ ಭರ್ಜರಿ ಸಿದ್ಧತೆ ನಡೆಯುತ್ತಿದೆ. "ಈ ಬಾರಿ ಕಾರ್ಯಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಇಲ್ಲಿವರೆಗೆ ಸಾರ್ವಜನಿಕರಿಗಾಗಿ ಸುಮಾರು 1 ರಿಂದ 1.5 ಲಕ್ಷ ಆಸನಗಳನ್ನು ಹಾಕಲಾಗುತ್ತಿತ್ತು. ಈ ಬಾರಿ 50,000 ಕ್ಕಿಂತಲೂ ಕಡಿಮೆ ಮಾಡಲಾಗಿದೆ" ಎಂದು ರಕ್ಷಣಾ ಕಾರ್ಯದರ್ಶಿ ಗಿರಿಧರ್​ ಅರಮನೆ ಶನಿವಾರ ತಿಳಿಸಿದ್ದಾರೆ.

ರೈಸಿನಾ ಹಿಲ್ಸ್ ಮತ್ತು ಪುರಾನಾ ಕಿಲಾ ನಡುವಿನ ರಸ್ತೆಯನ್ನು ಈ ಹಿಂದೆ 'ಕಿಂಗ್ಸ್ ವೇ' ಎಂದು ಕರೆಯಲಾಗುತ್ತಿತ್ತು. 1955ರಲ್ಲಿ ಇದಕ್ಕೆ 'ರಾಜಪಥ್'​ ಎಂದು ಹೆಸರಿಡಲಾಗಿದೆ. 2022ರಲ್ಲಿ 'ಕರ್ತವ್ಯ ಪಥ' ಎಂದು ಮರು ನಾಮಕರಣ ಮಾಡಲಾಯಿತು. "ಈ ರಸ್ತೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸುಲಭವಾಗಿ ಚಲಿಸಬಲ್ಲ ಆಸನಗಳನ್ನು ನಾಗರಿಕರಿಗಾಗಿ ಇರಿಸಲಾಗುತ್ತದೆ. 32,000 ಆಸನಗಳನ್ನು ಈಗಾಗಲೇ ನಿರ್ಧರಿಸಿರುವಂತೆ ಸಾರ್ವಜನಿಕರಿಗೆಂದೇ ಮೀಸಲಿಡಲಾಗುವುದು. ಈ ವಾರದಲ್ಲಿ ಇದಕ್ಕಾಗಿ ಟಿಕೆಟ್​ಗಳನ್ನು ಆನ್​ಲೈನ್​ನಲ್ಲಿ ಮಾರಾಟ ಮಾಡಲಾಗುತ್ತದೆ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಗಣರಾಜ್ಯೋತ್ಸವಕ್ಕೆ ನಾರಿಶಕ್ತಿ.. ನೌಕಾದಳವನ್ನು ಲೀಡ್ ಮಾಡಲಿದ್ದಾರೆ ಮಂಗಳೂರಿನ ದಿಶಾ

ನಾಳೆ ನೇತಾಜಿ ಜನ್ಮದಿನ ಆಚರಣೆ: ಕಳೆದ ಗಣರಾಜ್ಯೋತ್ಸವದ ಪರೇಡ್​ನಂತೆಯೇ ಈ ವರ್ಷವೂ ಜನವರಿ 23ರಂದು ನೇತಾಜಿ ಸುಭಾಷ್​ ಚಂದ್ರ ಬೋಸ್​ ಅವರ ಜನ್ಮದಿನದಂದೇ ಕಾರ್ಯಕ್ರಮಗಳು ಪ್ರಾರಂಭವಾಗುತ್ತವೆ. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಸುಮಾರು 1,200 ಆಸನಗಳು ಲಭ್ಯವಿರುತ್ತದೆ. ಆಮಂತ್ರಿತರಿಗೆ ರಾಜಧಾನಿಯಲ್ಲಿ ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಉಚಿತ ಮೆಟ್ರೋ ಪ್ರಯಾಣವನ್ನೂ ಪಡೆಯಬಹುದು. ಜನವರಿ 23ರಂದು ಪ್ರಾರಂಭಗೊಳ್ಳುವ ಕಾರ್ಯಕ್ರಮಗಳು ಜನವರಿ 30ರ ಹುತಾತ್ಮ ದಿನದವರೆಗೂ ಮುಂದುವರೆಯಲಿದೆ.

ಈಜಿಪ್ಟ್‌ ಅಧ್ಯಕ್ಷ ಗಣರಾಜ್ಯೋತ್ಸವ ಅತಿಥಿ: ಈ ಬಾರಿ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್​ ಫತ್ತಾಹ್​ ಎಲ್‌ಸಿಸಿ ಆಗಮಿಸಲಿದ್ದಾರೆ. ಅವರು ಜನವರಿ 24ರಂದು ದೆಹಲಿ ತಲುಪಲಿದ್ದು, ವಿದೇಶಾಂಗ ಇಲಾಖೆ ರಾಜ್ಯ ಖಾತೆ ಸಚಿವ ರಾಜ್​ಕುಮಾರ್​ ರಂಜನ್​ ಸ್ವಾಗತಿಸಲಿದ್ದಾರೆ. ಮರುದಿನ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಉಪಾಧ್ಯಕ್ಷ ಜಗದೀಪ್​ ಧನಕರ್​ ಅವರನ್ನು ಭೇಟಿಯಾಗಲಿದ್ದಾರೆ.

ಪರೇಡ್‌ನಲ್ಲಿ ಈಜಿಪ್ಟ್‌ ಸೇನಾ ತಂಡ ಭಾಗಿ:ಈ ವರ್ಷ ಒಟ್ಟು ಭಾರತೀಯ ವಾಯುಪಡೆಯ 50 ವಿಮಾನಗಳು ಪರೇಡ್​ನಲ್ಲಿ ಭಾಗವಹಿಸಲಿವೆ. ಭಾರತೀಯ ನೌಕಾಪಡೆಯ IL 38 'ಡಾಲ್ಫಿನ್' ವಿಮಾನ ಕಾರ್ಯಕ್ರಮದ ಮೊದಲ ಮತ್ತು ಕೊನೆಯ ಪ್ರದರ್ಶನ ನೀಡಲಿದೆ. ಮೆರವಣಿಗೆಯು 120 ಈಜಿಪ್ಟ್ ಸಶಸ್ತ್ರ ಪಡೆಗಳ ತಂಡವನ್ನೂ ಒಳಗೊಂಡಿರುತ್ತದೆ. ಈ ತಂಡ ಭಾರತೀಯ ಪಡೆಗಳೊಂದಿಗೆ ಪರೇಡ್‌ನಲ್ಲಿ ಪಾಲ್ಗೊಳ್ಳಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ:74 ನೇ ಗಣರಾಜ್ಯೋತ್ಸ:ಸಮವಸ್ತ್ರದೊಂದಿಗೆ ಪರೇಡ್‌ ಪೂರ್ವಾಭ್ಯಾಸ

ABOUT THE AUTHOR

...view details