ವಾರಣಾಸಿ(ಉತ್ತರ ಪ್ರದೇಶ): 73ನೇ ಗಣರಾಜ್ಯೋತ್ಸವ ಮುನ್ನಾದಿನವಾದ ನಿನ್ನೆ ದೇಶದ ಅತ್ಯುನ್ನತ ನಾಗರಿಕ ಪದ್ಮ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ದೇಶದ ಅನೇಕ ಎಲೆಮರೆಯ ಕಾಯಿಯಂತಿರುವ ಸಾಧಕರಿಗೆ ಪ್ರಶಸ್ತಿ ಹುಡುಕಿಕೊಂಡು ಬಂದಿದ್ದು, ಇದರಲ್ಲಿ ವಾರಣಾಸಿಯ ಸ್ವಾಮಿ ಶಿವಾನಂದ ಬಾಬಾ ಕೂಡ ಒಬ್ಬರು.
126 ವರ್ಷ ವಯಸ್ಸಿನ ಇವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಘೋಷಿಸಿದೆ. ಉತ್ತರ ಪ್ರದೇಶದ ಕಬೀರ್ ನಗರದಲ್ಲಿರುವ ಚಿಕ್ಕ ಕೋಣೆವೊಂದರಲ್ಲಿ ವಾಸಿಸುತ್ತಿರುವ ಇವರು, ಬೆಳಗ್ಗೆ 3 ಗಂಟೆಗೆ ಎದ್ದೇಳುತ್ತಾರೆ. ದಿನನಿತ್ಯದ ದಿನಚರಿಯೇ ಇವರ ಆರೋಗ್ಯದ ಗುಟ್ಟಾಗಿದೆ.
ಆಗಸ್ಟ್ 8,1896ರಂದು ಬಾಂಗ್ಲಾದೇಶದ ಸಿಲ್ಹೆಟ್ ಜಿಲ್ಲೆಯ ಹರಿಪುರ ಗ್ರಾಮದಲ್ಲಿ ಜನಿಸಿರುವ ಇವರು, ಸದ್ಯ ಉತ್ತರ ಪ್ರದೇಶದಲ್ಲಿ ವಾಸವಾಗಿದ್ದಾರೆ. ಪ್ರತಿದಿನ ಯೋಗ, ಪ್ರಾಣಯಾಮ ಮತ್ತು ಮನೆಯಲ್ಲಿ ತಯಾರಿಸುವ ಔಷಧಿ ಸೇವನೆ ಮಾಡುತ್ತಾರೆ.
ಬ್ರಹ್ಮಚಾರಿ ಜೀವನ ಅನುಸರಿಸುವ ಇವರು, ಹಾಲು, ಸಕ್ಕರೆ ಮತ್ತು ಎಣ್ಣೆಯಿಂದ ತಯಾರಿಸುವ ಯಾವುದೇ ಆಹಾರ ಪದಾರ್ಥ ಸೇವನೆ ಮಾಡಲ್ಲ. ಪ್ರಮುಖವಾಗಿ ಬೇಯಿಸಿದ ಆಹಾರ ಮತ್ತು ತರಕಾರಿ ಸೇವನೆ ಮಾಡ್ತಾರೆ. ಬೆಳಗಿನ ಜಾವ 3 ಗಂಟೆಗೆ ಏಳುವ ಬಾಬಾ, ದೈನಂದಿನ ಕರ್ಮದ ನಂತರ ಶಿವನ ಮಂತ್ರ ಪಠಣೆ ಮಾಡ್ತಾರೆ. ನಂತರ ಬೆಳಗ್ಗೆ 5ರಿಂದ 6 ಗಂಟೆಯವರೆಗೆ ಯೋಗಾಸನ, 6:30ಕ್ಕೆ ಒಂದು ಲೋಟ ನೀರು ಸೇವನೆ ಮಾಡ್ತಾರೆ. ಇದಾದ ಬಳಿಕ ಶ್ರೀ ಕೃಷ್ಣನ ಮಂತ್ರ ಪಠಣ ಮಾಡಲು ಆರಂಭಿಸುತ್ತಾರೆ.