ಕೋಲ್ಕತ್ತಾ (ಪಶ್ಚಿಮಬಂಗಾಳ):ಏಷ್ಯಾದ ಅತಿದೊಡ್ಡ ರೆಡ್ ಲೈಟ್ ಏರಿಯಾ ಸೋನಗಚಿ ಬೆಂಗಾಳಿಗಳ ಅತಿದೊಡ್ಡ ಹಬ್ಬವಾದ ದುರ್ಗಾಪೂಜೆಯನ್ನು ವಿಭಿನ್ನ ರೀತಿಯಲ್ಲಿ ಆಯೋಜಿಸಲು ಪ್ಲಾನ್ ಮಾಡಿದೆ. ಸೋನಗಚಿ ಪ್ರದೇಶದ ಲೈಂಗಿಕ ಕಾರ್ಯಕರ್ತೆಯರು ಕಳೆದ 10 ವರ್ಷಗಳಿಂದ ದುರ್ಗಾ ಪೂಜೆಯನ್ನು ಮಾಡುತ್ತಾ ಬರುತ್ತಿದ್ದು, ಈ ಬಾರಿ ಸರ್ವಧರ್ಮಗಳ ಸಮ್ಮುಖದಲ್ಲಿ ದುರ್ಗಾದೇವಿ ಪೂಜೆಗೆ ಸನ್ನದ್ಧರಾಗಿದ್ದಾರೆ.
ದೇಶದಲ್ಲಿ ಕೋಮುಗಲಭೆಗಳು ಹೆಚ್ಚುತ್ತಿರುವ ಅಹಿತಕರ ಘಟನೆಗಳ ಮಧ್ಯೆ ಇಲ್ಲಿನ ಲೈಂಗಿಕ ಕಾರ್ಯಕರ್ತೆಯರು ವಿಭಿನ್ನ ರೀತಿಯಲ್ಲಿ ದುರ್ಗಾದೇವಿ ಪೂಜೆಗೆ ಮುಂದಾಗಿದ್ದಾರೆ. ವಿವಿಧ ಧರ್ಮಗಳ ಮುಖಂಡರನ್ನು ಪೂಜೆಗೆ ಆಹ್ವಾನಿಸಿ ಅವರ ಸಮ್ಮುಖದಲ್ಲೇ ಜಗನ್ಮಾತೆಯ ಪೂಜೆಗೆ ಏರ್ಪಾಡು ಮಾಡಲಾಗಿದೆ.
ಏಳು ಧರ್ಮಗಳ ಮುಖಂಡರಿಗೆ ಆಹ್ವಾನ:ಈ ಬಾರಿಯ ಸೋನಗಚಿಯ ದುರ್ಗೋತ್ಸವಕ್ಕೆ ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತ, ಜೈನ ಸೇರಿದಂತೆ 7 ಧರ್ಮ ಗುರುಗಳಿಗೆ ಆಹ್ವಾನ ನೀಡಲಾಗಿದೆ. ಆಹ್ವಾನಿತರ ಪಟ್ಟಿಯಲ್ಲಿ ಬಿರ್ಭುಮ್‌ನ ತಾರಾಪೀಠದ ಮುಖ್ಯ ಅರ್ಚಕ, ದಕ್ಷಿಣೇಶ್ವರದ ಅರ್ಚಕ, ಗುರುದ್ವಾರ, ನಖೋಡಾ ಮಸೀದಿಯ ಇಮಾಮ್ ಮತ್ತಿತರರು ಇದ್ದಾರೆ. ಪೂಜೆಯನ್ನು ಅವರಿಂದಲೇ ಉದ್ಘಾಟಿಸಲಾಗುವುದು ಎಂದು ಲೈಂಗಿಕ ಕಾರ್ಯಕರ್ತೆಯರ ಸಂಘಟನೆಯ ಮಹಿಳಾ ಸಮನ್ವಯ ಸಮಿತಿ ಕಾರ್ಯದರ್ಶಿ ವಿಶಾಖಾ ಲಷ್ಕರ್ ತಿಳಿಸಿದ್ದಾರೆ.