ನವದೆಹಲಿ:ಉತ್ತರಪ್ರದೇಶದ ಸುಗಂಧ ದ್ರವ್ಯ ಉದ್ಯಮಿ ಪಿಯೂಷ್ ಜೈನ್ ಮನೆ ಮೇಲೆ ನಡೆದ ದಾಳಿಯಲ್ಲಿ ಸಿಕ್ಕ 197 ಕೋಟಿ ರೂಪಾಯಿಯಲ್ಲಿ 52 ಕೋಟಿ ರೂಪಾಯಿಯನ್ನು ತೆರಿಗೆಯಾಗಿ ಪಾವತಿಸಲಾಗಿದೆ ಎಂಬ ವದಂತಿಯನ್ನು ಜಿಎಸ್ಟಿ ಗುಪ್ತಚರ ನಿರ್ದೇಶನಾಲಯ ತಳ್ಳಿಹಾಕಿದೆ.
ದಾಳಿ ವೇಳೆ ವಶಪಡಿಸಿಕೊಂಡ ನಗದು ಮತ್ತು ಚಿನ್ನಾಭರಣ ಪಿಯೂಷ್ ಜೈನ್ ಅವರ ಸುಗಂಧ ದ್ರವ್ಯಗಳ ಉತ್ಪಾದನಾ ಘಟಕದ ವಹಿವಾಟಾಗಿದೆ. ಪರಿಹಾರವಾಗಿ ಯಾವುದೇ ಮೊತ್ತವನ್ನು ಕಟ್ಟಿಲ್ಲ. ಇದು ಸಂಪೂರ್ಣ ಊಹಾಪೋಹವಾಗಿದೆ. ಅಲ್ಲದೇ ತನಿಖೆಯ ದಿಕ್ಕನ್ನು ಹಾಳು ಮಾಡುವ ತಂತ್ರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿ ವೇಳೆ ಪತ್ತೆಯಾದ ಹಣದಲ್ಲಿ ಉದ್ಯಮಿ ಪಿಯೂಷ್ ಜೈನ್ 52 ಕೋಟಿ ರೂಪಾಯಿಗಳನ್ನು ದಂಡವಾಗಿ ಪಾವತಿಸಲಾಗುವುದು. ಉಳಿದ ಹಣವನ್ನು ವಾಪಸ್ ನೀಡಲು ಕೋರಿದ್ದಾರೆ. ಇದನ್ನು ಡಿಜಿಜಿಐ ಅಧಿಕಾರಿಗಳು ಒಪ್ಪಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ವದಂತಿಗೆ ಸ್ಪಷ್ಟನೆ ನೀಡಿರುವ ಅಧಿಕಾರಿಗಳು ಇದೆಲ್ಲ ಬರೀ ಕಟ್ಟುಕತೆ. ಆಧಾರರಹಿತ ಸುದ್ದಿ. ಪಿಯೂಷ್ ಜೈನ್ 52 ಕೋಟಿ ರೂಪಾಯಿಗಳನ್ನು ತೆರಿಗೆ ಕಟ್ಟುವೆ ಎಂದು ಹೇಳಿಲ್ಲ. ಉಳಿದ ಹಣವನ್ನೂ ಹಿಂದಿರುಗಿಸುವುದಿಲ್ಲ ಎಂದು ಹೇಳಿದ್ದಾರೆ.
ಇದಲ್ಲದೇ, ಈವರೆಗೂ ವಶಪಡಿಸಿಕೊಂಡ ನಗದು ಮತ್ತು ಚಿನ್ನ ಸೇರಿದಂತೆ ಎಲ್ಲ ಆಸ್ತಿಯನ್ನು ಲೆಕ್ಕ ಹಾಕಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ನೀಡಲಾಗಿದೆ ಎಂದು ಡಿಜಿಜಿಐ ತಿಳಿಸಿದೆ. ತೆರಿಗೆ ವಂಚನೆ ಆರೋಪದ ಮೇಲೆ ಸುಗಂಧ ದ್ಯವ್ಯ ಉದ್ಯಮಿ ಪಿಯೂಷ್ ಜೈನ್ರ ಕಾನ್ಪುರದ ಮನೆ, ಕಾರ್ಖಾನೆಯ ಮೇಲೆ ನಡೆದ ದಾಳಿಯಲ್ಲಿ 197 ಕೋಟಿ ರೂಪಾಯಿ ನಗದು, 23 ಕೆ.ಜಿ. ಚಿನ್ನ ಪತ್ತೆಯಾಗಿತ್ತು. ಬಳಿಕ ಆರೋಪಿ ಪಿಯೂಷ್ ಜೈನ್ರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ತನಿಖೆ ಪ್ರಗತಿ ಹಂತದಲ್ಲಿದೆ.
ಇದನ್ನೂ ಓದಿ:ಕಾಳಿಚರಣ್ ಸಂತನ ರೂಪದಲ್ಲಿರುವ ರಾಕ್ಷಸ.. ಛತ್ತೀಸ್ಗಢ ಸಿಎಂ ಭೂಪೇಲ್ ಬಘೇಲಾ ಕಟು ಟೀಕೆ