ಹೈದರಾಬಾದ್ (ತೆಲಂಗಾಣ): ಬಿಜೆಪಿ ತೆಲಂಗಾಣ ಘಟಕದ ಬಂಡಿ ಸಂಜಯ್ ಅವರನ್ನು ಕೊಲೆ ಮಾಡಲು ಯತ್ನಿಸಲಾಗಿದೆ ಎಂಬ ವರದಿಯನ್ನು ಹೈದರಾಬಾದ್ ಜಂಟಿ ಪೊಲೀಸ್ ಆಯುಕ್ತ ಪಿ.ವಿಶ್ವಪ್ರಸಾದ್ ತಳ್ಳಿಹಾಕಿದ್ದಾರೆ. ಇದೊಂದು ಸುಳ್ಳು ಸುದ್ದಿ, ಕೆಲವು ಮಾಧ್ಯಮಗಳು ಆಧಾರರಹಿತವಾಗಿ ವದಂತಿ ಹರಡುತ್ತಿವೆ ಎಂದು ಸ್ಪಷ್ಟನೆ ನೀಡಿದ್ದಾರೆ.
‘ಕೆಲವು ಟಿವಿ ಚಾನಲ್‌ಗಳು ಬಂಡಿ ಸಂಜಯ್ ಅವರನ್ನು ಕೊಲೆ ಮಾಡಲು ಯತ್ನಿಸಲಾಗಿದೆ ಎಂಬ ಸುಳ್ಳು ಸುದ್ದಿಯನ್ನು ಹರಡಿಸಿದ್ದಾರೆ. ಈ ಮಾಹಿತಿ ತಪ್ಪಾಗಿದೆ. ದಯವಿಟ್ಟು ಇಂತಹ ವದಂತಿಗಳನ್ನು ನಂಬಬೇಡಿ’ ಎಂದು ವಿಶ್ವಪ್ರಸಾದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಎರಡು ರಾಜಕೀಯ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಕಾರಿನ ಗಾಜಿಗೆ ಹಾನಿಯಾನಿಗೆ. ಕೇಂದ್ರ ವಲಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಯಾರಿಗೂ ಯಾವುದೇ ಗಾಯಗಳಾಗಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ರಾಮ್ಗೋಪಾಲ್ ಪೇಟೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಸ್ಥಳದಲ್ಲಿದ್ದ ಬಂಡಿ ಸಂಜಯ್ ಅವರನ್ನು ಅಲ್ಲಿಂದ ತೆರಳುವಂತೆ ವಿನಂತಿಸಿದ್ದಾರೆ. ಆದರೆ ಅವರ ಕಾರಿಗೆ ಕೆಲವರು ಅಡ್ಡಗಟ್ಟಿ ಕಿಟಕಿ ಗಾಜನ್ನು ಕೈಯಿಂದ ಪುಡಿ ಮಾಡಿದ್ದರು. ಈ ವೇಳೆ ಸ್ಥಳದಲ್ಲಿ ಗೊಂದಲ ಸೃಷ್ಟಿಯಾಗಿತ್ತು ಎಂದು ಜಂಟಿ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.